ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಉತ್ತಮ ಹವಾಮಾನ ಪರಿಸ್ಥಿತಿಯಿಂದಾಗಿ ಗಾಳಿಯ ಗುಣಮಟ್ಟ ತುಸು ಸುಧಾರಿಸಿದೆ. ಆದಾಗ್ಯೂ, ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 'ಕಳಪೆ' ಮಟ್ಟದಲ್ಲೇ ಇದೆ.
ಶನಿವಾರ ಬೆಳಿಗ್ಗೆ 9ರ ಹೊತ್ತಿಗೆ ದೆಹಲಿ ಎಕ್ಯೂಐ 227ರಷ್ಟು ದಾಖಲಾಗಿದೆ. ಇದು ಶುಕ್ರವಾರ ಬೆಳಿಗ್ಗೆ 281ರಷ್ಟಿತ್ತು.
ಇದರೊಂದಿಗೆ, ನಾಲ್ಕು ದಿನ (ಗುರುವಾರದ ವರೆಗೆ) ಅತ್ಯಂತ ಕಳಪೆ ಮಟ್ಟದಲ್ಲಿದ್ದ ವಾಯು ಗುಣಮಟ್ಟವು ಸತತ ಎರಡನೇ ದಿನ ಸುಧಾರಿಸಿದಂತಾಗಿದೆ. ಹಾಗಿದ್ದರೂ, ಮುಂಡ್ಕ ಮತ್ತು ಆನಂದ ವಿಹಾರ್‌ನಲ್ಲಿ ಎಕ್ಯೂಐ ಈಗಲೂ 'ಅತ್ಯಂತ ಕಳಪೆ' ಮಟ್ಟದಲ್ಲೇ ಇದೆ ಎನ್ನಲಾಗಿದೆ.
ಮುಂದಿನ ಕೆಲವು ದಿನಗಳವರೆಗೆ ಗಾಳಿ ಉತ್ತಮವಾಗಿ ಬೀಸಲಿದ್ದು, ಅನುಕೂಲಕರ ಹವಾಮಾನ ಪರಿಸ್ಥಿತಿ ಇರಲಿದೆ. ಒಂದುವೇಳೆ ಹಾಗೇನಾದರು ಆಗದಿದ್ದರೆ, ಮತ್ತೆ ಮಾಲಿನ್ಯದ ಮಟ್ಟ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಎಕ್ಯೂಐ ಮಟ್ಟವು ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ಅತ್ಯಂತ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.