ನವದೆಹಲಿ: ಬ್ರಿಟಿಷ್ ರಾಕ್‌ಬ್ಯಾಂಡ್ 'ಕೋಲ್ಡ್‌ಪ್ಲೇ' ಮತ್ತು ನಟ-ಗಾಯಕ ದಿಲ್ಜಿತ್ ದೊಸಾಂಝ್ ಅವರ ಸಂಗೀತ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ಹಣದ ಅಕ್ರಮ ವಹಿವಾಟು ಪ್ರಕರಣದ ಕುರಿತಾಗಿ ನಡೆದ ದಾಳಿ ಸಂದರ್ಭದಲ್ಲಿ ಶಂಕಿತ ಅಕ್ರಮಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಹೇಳಿದೆ.
ಹಣದ ಅಕ್ರಮ ವಹಿವಾಟು ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ ಇ.ಡಿ. ಐದು ರಾಜ್ಯಗಳ 13 ಸ್ಥಳಗಳಲ್ಲಿ ಶುಕ್ರವಾರ ದಾಳಿ ನಡೆಸಿದೆ. ದೆಹಲಿ, ಮುಂಬೈ, ಜೈಪುರ, ಬೆಂಗಳೂರು, ಚಂಡೀಗಢದಲ್ಲಿ ದಾಳಿ ನಡೆದಿದೆ.
ದೊಸಾಂಝ್ ಅವರ 'ದಿಲ್-ಲುಮಿನಾತಿ' ಸಂಗೀತ ಕಾರ್ಯಕ್ರಮವು ದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಕೋಲ್ಡ್‌ಪ್ಲೇ ಕಾರ್ಯಕ್ರಮವು ನವಿ ಮುಂಬೈನಲ್ಲಿ ಜನವರಿಯಲ್ಲಿ ನಡೆಯಲಿದೆ.
ಕಾರ್ಯಕ್ರಮಗಳ ಪ್ರವೇಶ ಟಿಕೆಟ್ ಬಹಳ ಬೇಗ ಮಾರಾಟವಾದ ನಂತರ, ಈ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ತಾವು ಮಾರಾಟ ಮಾಡುತ್ತಿರುವುದಾಗಿ ಹೇಳಿ ವಂಚಕರು ಜನರಿಗೆ ಮೋಸ ಎಸಗಿದ್ದಾರೆ ಎಂಬ ವರದಿಗಳನ್ನು ಗಮನಿಸಿ ತನಿಖೆ ಆರಂಭಿಸಲಾಯಿತು ಎಂದು ಇ.ಡಿ. ಹೇಳಿದೆ.
ಈ ಕಾರ್ಯಕ್ರಮಗಳಿಗೆ ಹೋಗಲು ಬಯಸಿರುವವರನ್ನು ಕೆಲವರು ವಂಚಿಸುತ್ತಿದ್ದಾರೆ ಎಂಬ ಹಲವಾರು ದೂರುಗಳು ಪೊಲೀಸರಿಗೆ ಬಂದಿವೆ. ಟಿಕೆಟ್ ಕಾಯ್ದಿರಿಸುವ ಸೇವೆ ಒದಗಿಸುವ ಬುಕ್‌ಮೈಶೋ ಕೂಡ ದೂರು ನೀಡಿದೆ. ಈ ದೂರುಗಳನ್ನು ಇ.ಡಿ. ಪರಿಗಣನೆಗೆ ತೆಗೆದುಕೊಂಡಿದೆ.
ವಂಚಕರು ನಕಲಿ ಟಿಕೆಟ್‌ಗಳನ್ನು ಭಾರಿ ಬೆಲೆಗೆ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಬಹುನಿರೀಕ್ಷಿತವಾದ ಈ ಕಾರ್ಯಕ್ರಮಗಳ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ ಎಂದು ಬುಕ್‌ಮೈಶೋ ಮತ್ತು ಜೊಮಾಟೊ ಲೈವ್ ಹೇಳಿವೆ. ಈ ಕಾರಣದಿಂದಾಗಿ ಟಿಕೆಟ್‌ಗಳನ್ನು ಭಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಆರಂಭವಾಯಿತು ಎಂದು ಇ.ಡಿ ಹೇಳಿದೆ.
ತಮಗೆ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಅಥವಾ ಸರಿಯಾದ ಟಿಕೆಟ್‌ಗಳನ್ನು ತೀರಾ ದುಬಾರಿ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದನ್ನು ಅಭಿಮಾನಿಗಳು ಕಂಡುಕೊಂಡಿದ್ದಾರೆ ಎಂದು ಕೂಡ ಇ.ಡಿ ಹೇಳಿದೆ.
'ಇನ್‌ಸ್ಟಾಗ್ರಾಂ, ವಾಟ್ಸ್‌ಆಯಪ್ ಮತ್ತು ಟೆಲಿಗ್ರಾಂ ಮೂಲಕ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡುವವರ ಕುರಿತ ಮಾಹಿತಿಯು ದಾಳಿ ಸಂದರ್ಭದಲ್ಲಿ ದೊರೆತಿದೆ' ಎಂದು ಇ.ಡಿ. ತಿಳಿಸಿದೆ. ಟಿಕೆಟ್ ಮಾರಾಟ ಹಗರಣಕ್ಕೆ ಬಳಕೆಯಾದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸಿಮ್ ಕಾರ್ಡ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದ ಬೆಳವಣಿಗೆಯೊಂದರಲ್ಲಿ ದೆಹಲಿ ಹೈಕೋರ್ಟ್, ಇಂತಹ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ಅಧಿಕೃತ ವೇದಿಕೆಗಳ ಮೂಲಕ ಮರು ಮಾರಾಟ ಮಾಡುವುದನ್ನು ಕಾನೂನಿನ ಚೌಕಟ್ಟಿಗೆ ತರುವುದರ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.