ಮಂಜೇಶ್ವರ: ದುರ್ಬಲರು, ಮಾನಸಿಕ ಅಸ್ವಸ್ಥರ ಪುನಶ್ಚೇತನಕ್ಕಾಗಿ ನಡೆಸುವ ಸೇವೆ ನೈಜ ದೇಶ ಸೇವೆಯಾಗಿದೆ ಎಂಬುದಾಗಿ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ತಿಳಿಸಿದರು.
ಅವರು ಮಂಜೇಶ್ವರದ ಬಾಚಳಿಕೆಯಲ್ಲಿ ಕಳೆದ 15ವರ್ಷಗಳಿಂದ ಮಾನಸಿಕ ಅಸೌಖ್ಯಪೀಡಿತರ ಆರೈಕೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ 'ಸ್ನೇಹಾಲಯ'ವತಿಯಿಂದ ಆರಂಭಿಸಲಾದ ವ್ಯಸನಮುಕ್ತ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬದ್ಧತೆ ಕಾಯ್ದುಕೊಳ್ಳುತ್ತಿರುವ ಸಂಘಟನೆಗಳಿದ್ದಲ್ಲಿ, ಸಹಾಯ ಒದಗಿಸುವ ಸಮಾಜ ಸದಾ ಜತೆಗಿರುತ್ತದೆ ಎಂಬುದಕ್ಕೆ ಸ್ನೇಹಾಲಯ ನಿದರ್ಶನವಾಗಿದೆ. ವ್ಯಸನಮುಕ್ತ ಪರಿಕಲ್ಪನೆಯಿಂದ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ. ಸ್ನೇಹಾಲಯ ಎಂಬ ಸಂಸ್ಥೆ ಮನಪರಿವರ್ತನೆಯ ಕೇಂದ್ರವಾಗಿದ್ದು, ನಿಜವಾದ ದೇಶ ಪ್ರೇಮ ಇಲ್ಲಿ ಅಡಕವಾಗಿದೆ. ಸ್ನೇಹಾಲಯದ ಉತ್ತಮ ಸೇವಾ ಕಾರ್ಯಗಳಿಂದ ದೇಶಕ್ಕೆ ಉದಾತ್ತ ಸಂದೇಶ ರವಾನೆಯಾಗಿದೆ ಎಂಬುದಾಗಿ ತಿಳಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಪೀಟರ್ ಪಾವ್ಲ್ ಸಲ್ದಾನಾ ನೂತನ ಕೇಂದ್ರ ಲೋಕಾರ್ಪಣೆಗೈದರು. ದೆಹಲಿ ಧರ್ಮ ಪ್ರಾಂತ್ಯದ ಸಹಾಯಕ ಧರ್ಮಾಧ್ಯಕ್ಷ ವಂದನೀಯ ದೀಪಕ್ ವಲೇರಿಯನ್ ತಾವೊ, ಅನಿವಾಸಿ ಭಾರತೀಯ ಉದ್ಯಮಿ, ಮೈಕೆಲ್ ಡಿ.ಸೋಜ, ಶಾಸಕ ಎ.ಕೆ.ಎಂ ಅಶ್ರಫ್, ಪತ್ರಕರ್ತ ವಾಲ್ಟರ್ ನಂದಳಿಕೆ ಮುಖ್ಯ ಅತಿಥಿಯಾಗಿ ಭಾಗವಗಿಸಿದ್ದರು. ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಮುಖ್ಯ ಭಾಷಣ ಮಾಡಿದರು. ಧಾರ್ಮಿಕ ಜ್ಞಾನಿ ಆತ್ಮಾದಾಸ್ ಯಾಮಿ ಆಶೀರ್ವಚನ ನೀಡಿದರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ, ಗ್ರಾಪಂ ಸದಸ್ಯೆ ಹಾಜಿರಾಮೂಸಾ, ಕೆ. ಆರ್ ಜಯಾನಂದ ಮೊದಲಾದವರು ಉಪಸ್ಥಿತರಿದ್ದರು.