ನವದೆಹಲಿ: ಪೂರ್ವ ಲಡಾಖ್ ಸೆಕ್ಟರ್‌ನ ಡೆಪ್ಸಾಂಗ್ -ಡೆಮ್‌ಚೋಕ್ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
'ಎರಡು ದೇಶಗಳ ಒಪ್ಪಂದದ ಪ್ರಕಾರ ಭಾರತೀಯ ಸೇನಾಪಡೆಗಳು ರಕ್ಷಣಾ ಉಪಕರಣಗಳ ಸಹಿತ ಹಿಂಬದಿಯ ಸ್ಥಳಗಳಿಗೆ ತೆರಳುವ ಪ್ರಕ್ರಿಯೆ ಆರಂಭಿಸಿವೆ' ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ನಾಲ್ಕು ವರ್ಷಗಳ ಸುದೀರ್ಘ ಸೇನಾ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಇನ್ನೂ ಸಂಘರ್ಷ ಉಳಿದಿರುವ ಸ್ಥಳಗಳಲ್ಲಿ ಗಸ್ತು ತಿರುಗಲು ಈಚೆಗೆ ಚೀನಾ -ಭಾರತ ಒಪ್ಪಂದ ಮಾಡಿಕೊಂಡಿದ್ದವು.
ಸಂಧಾನಕಾರರ ನಡುವೆ ಕಳೆದ ಕೆಲವು ವಾರಗಳಿಂದ ನಡೆದ ಮಾತುಕತೆಗಳ ನಂತರ ಆಗಿರುವ ಪ್ರಮುಖ ಬೆಳವಣಿಗೆ ಇದಾಗಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಭೇಟಿ ನೀಡುವ ಮುನ್ನಾ ದಿನ ಈ ಮಹತ್ವದ ಬೆಳವಣಿಗೆ ನಡೆದಿತ್ತು.
ಪ್ರಧಾನಿ ಮೋದಿ ಮತ್ತು ಷಿ ಜಿನ್‌ಪಿಂಗ್ ಅವರು ಸರಿಸುಮಾರು ಐದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಲಡಾಖ್‌ನ ಗಡಿ ವಿವಾದ ಪರಿಹರಿಸುವುದಕ್ಕೆ ಸಂಬಂಧಿಸಿದ ಒಪ್ಪಂದವನ್ನು ಇಬ್ಬರೂ ಅನುಮೋದಿಸಿದ್ದರು. ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಅವರು, ಗಡಿ ವಿಚಾರ ಕುರಿತ ಭಿನ್ನಾಭಿಪ್ರಾಯಗಳು ಎಲ್‌ಎಸಿ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಹಾಳುಗೆಡವಲು ಅವಕಾಶ ಕೊಡಬಾರದು ಎಂಬುದನ್ನು ಒತ್ತಿಹೇಳಿದ್ದರು.