HEALTH TIPS

ಅತ್ಯಾಚಾರ | ಸಕಾಲಿಕದಲ್ಲಿ ಕ್ರಮ ಕೈಗೊಳ್ಳದ ಪ.ಬಂಗಾಳ ಸರ್ಕಾರ: ರಾಜ್ಯಪಾಲ ಆರೋಪ

 ಕೋಲ್ಕತ್ತ: ಸಕಾಲದಲ್ಲಿ ಕ್ರಮ ಕೈಗೊಳ್ಳದಿರುವುದು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಪಶ್ಚಿಮ ಬಂಗಾಳ ಗವರ್ನರ್‌ ಸಿ.ವಿ.ಆನಂದ್ ಬೋಸ್‌ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರದಲ್ಲಿ 10 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ಗಲಭೆ ಸೃಷ್ಟಿಯಾಗಿರುವ ಬೆನ್ನಲ್ಲೇ ಗವರ್ನರ್‌ ಈ ಹೇಳಿಕೆ ನೀಡಿದ್ದಾರೆ.

'ಸಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಕಾರಣ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಅಸಮರ್ಥವಾಗಿ ನಿಭಾಯಿಸಿದ್ದು, ಇದೇ ರೀತಿಯ ಘೋರ ಘಟನೆಗಳು ಪುನರಾವರ್ತನೆಯಾಗುತ್ತಿವೆ' ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

'ಪ್ರಸಕ್ತ ಬಂಗಾಳ ಸರ್ಕಾರದಲ್ಲಿ ಹಿಂಸಾಚಾರಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ತೋರುತ್ತಿದೆ. ಅಪರಾಧಿಗಳ ವಿರುದ್ಧ ರಾಜ್ಯ ಸರ್ಕಾರ ಕೈಗೊಳ್ಳುವ ಕಠಿಣ ಕ್ರಮವು ಘೋರ ಅಪರಾಧಗಳ ತಡೆಗೆ ಸಹಾಯಕವಾಗುತ್ತದೆ. ಇಲ್ಲದಿದ್ದರೆ, ಅದು ರಾಜ್ಯದಲ್ಲಿ ಅತ್ಯಾಚಾರ ಮತ್ತು ಹಿಂಸಾಚಾರವನ್ನು ಉತ್ತೇಜಿಸುತ್ತದೆ. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಎಂಬ ಶಾಶ್ವತ ಸತ್ಯವನ್ನು ರಾಜ್ಯ ಸರ್ಕಾರ ಅರ್ಥಮಾಡಿಕೊಳ್ಳಲು ಇದು ಸಕಾಲ' ಎಂದು ಬೋಸ್‌ ಹೇಳಿದ್ದಾರೆ.

10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು, 'ದಕ್ಷಿಣ 24 ಪರಗಣ' ಜಿಲ್ಲೆಯ ಜಯನಗರ ಪ್ರದೇಶದ ಹಳ್ಳಿಯೊಂದರ ನಿರ್ಜನ ಪ್ರದೇಶದಲ್ಲಿ ಮೃತದೇಹ ಶನಿವಾರ ಪತ್ತೆಯಾಗಿತ್ತು.

ಬಾಲಕಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಮೃತದೇಹ ಪತ್ತೆಯಾದ ಬಳಿಕ ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್‌ ಹೊರ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಠಾಣೆ ಎದುರು ನಿಲ್ಲಿಸಿದ್ದ ಹಲವು ವಾಹನಗಳಿಗೆ ಹಾನಿ ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries