ನ್ಯೂಯಾರ್ಕ್/ ಪ್ಯಾರಿಸ್: ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಇಸ್ರೇಲ್‌ನ ಮನವಿಯನ್ನು ಸ್ಪೇನ್ ಹಾಗೂ ಫ್ರಾನ್ಸ್ ತಳ್ಳಿಹಾಕಿವೆ.
'ದಕ್ಷಿಣ ಲೆಬನಾನ್‌ನಲ್ಲಿರುವ ಶಾಂತಿಪಾಲನಾ ಪಡೆಗಳನ್ನು (ಯುಎನ್‌ಐಎಫ್‌ಐಎಲ್) ವಾಪಸ್ ಕರೆಸಿಕೊಳ್ಳುವುದಿಲ್ಲ' ಎಂದು ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಸ್ ಸೋಮವಾರ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್‌ನಲ್ಲಿರುವ ಶಾಂತಿಪಾಲನಾ ಪಡೆಯನ್ನು ವಾಪಸ್ ಕರೆಸುವಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರನ್ನು ಕೇಳಿಕೊಂಡಿದ್ದರು.
'ಹಿಜ್ಬುಲ್ಲಾ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳು ಮತ್ತು ನಮ್ಮ ಸೇನೆಯು ದಾಳಿ ನಡೆಸುವ ಪ್ರದೇಶಗಳಿಂದ ಯುಎನ್‌ಐಎಫ್‌ಐಎಲ್ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಕಾಲ ಕೂಡಿ ಬಂದಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.
ಟ್ಯಾಂಕ್ ನುಗ್ಗಿಸಿದ ಸೇನೆ-ಆರೋಪ: ದಕ್ಷಿಣ ಲೆಬನಾನ್‌ನಲ್ಲಿರುವ ತನ್ನ ಶಾಂತಿಪಾಲನಾ ಪಡೆಗಳ ನೆಲೆಯ ಮೇಲೆ ಇಸ್ರೇಲ್ ಸೇನೆಯು ಟ್ಯಾಂಕ್‌ಗಳನ್ನು ನುಗ್ಗಿಸಿದೆ ಎಂದು ವಿಶ್ವಸಂಸ್ಥೆ ಸೋಮವಾರ ಆರೋಪಿಸಿದೆ.
ಯುಎನ್‌ಐಎಫ್‌ಐಎಲ್ ತಂಡದ ನೆಲೆಯ ಮುಖ್ಯ ಗೇಟ್ ಅನ್ನು ಇಸ್ರೇಲ್‌ನ ಎರಡು ಟ್ಯಾಂಕ್‌ಗಳು ಭಾನುವಾರ ನಾಶಮಾಡಿವೆ. ಟ್ಯಾಂಕ್‌ಗಳು ಅಲ್ಲಿಂದ ತೆರಳಿದ ಬಳಿಕ, ಕಟ್ಟಡದಿಂದ ಸುಮಾರು 100 ಮೀ. ದೂರದಲ್ಲಿ ಷೆಲ್‌ಗಳು ಸ್ಫೋಟಗೊಂಡಿವೆ. ಈ ವೇಳೆ ಆವರಿಸಿದ ಹೊಗೆಯಿಂದ ಯುಎನ್‌ಐಎಫ್‌ಐಎಲ್‌ನ ಕೆಲವು ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಆದರೆ ಇಸ್ರೇಲ್ ಸೇನೆ ಈ ಆರೋಪಗಳನ್ನು ಅಲ್ಲಗಳೆದಿದೆ. ಹಿಜ್ಬುಲ್ಲಾ ಬಂಡುಕೋರರು ಟ್ಯಾಂಕ್‌ಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದ್ದು, 25 ಸೈನಿಕರು ಗಾಯಗೊಂಡಿದ್ದಾರೆ. ಯುಎನ್‌ಐಎಫ್‌ಐಎಲ್ ನೆಲೆಗೆ ತೀರಾ ಸನಿಹ ಈ ದಾಳಿ ನಡೆದಿದೆ. ದಾಳಿಯಿಂದ ಪಾರಾಗಲು ಟ್ಯಾಂಕ್‌ವೊಂದು ಶಾಂತಿಪಾಲನಾ ಪಡೆಯ ನೆಲೆಯತ್ತ ಧಾವಿಸಿದೆ ಎಂದು ತಿಳಿಸಿದೆ.
'ಶಾಂತಿಪಾಲನಾ ಪಡೆಯ ನೆಲೆಗೆ ಟ್ಯಾಂಕ್ ಅನ್ನು ನುಗ್ಗಿಸಿಲ್ಲ. ಭಾರಿ ಕ್ಷಿಪಣಿ ದಾಳಿಯಿಂದ ಪಾರಾಗಲು ಟ್ಯಾಂಕ್‌ವೊಂದು ನೆಲೆಯತ್ತ ಹೋಗಿದೆ' ಎಂದು ಸೇನೆಯ ಅಂತರರಾಷ್ಟ್ರೀಯ ವಕ್ತಾರ ನದಾವ್ ಶೊಶನಿ ಹೇಳಿದ್ದಾರೆ.
ಗಾಯಗೊಂಡ ಸೈನಿಕರನ್ನು ಸ್ಥಳಾಂತರಿಸುವಾಗ ಅವರಿಗೆ ರಕ್ಷಣೆ ಒದಗಿಸಲು ಹೊಗೆಯನ್ನು ಪರದೆಯಾಗಿ ಬಳಸಲಾಗಿದೆ. ಅದರಿಂದ ಶಾಂತಿಪಾಲನಾ ಪಡೆಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದಿದ್ದಾರೆ.