ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಸಿಬಿಐ, ಶಿವಗಂಗಾ ಕ್ಷೇತ್ರದ ಸಂಸದ ಕಾರ್ತಿ ಚಿದಂಬರಂ, ಅವರ ಆಪ್ತ ಎಸ್. ಭಾಸ್ಕರರಾಮನ್, ಲಂಚ ನೀಡಿರುವ ಆರೋಪ ಇರುವ ತಲವಂಡಿ ಸೊಬೊ ಪವರ್ ಲಿಮಿಟೆಡ್(ಐಎಸ್‌ಪಿಎಲ್) ಹೆಸರನ್ನು ಉಲ್ಲೇಖಿಸಲಾಗಿದೆ.
ಕ್ರಿಮಿನಲ್ ಸಂಚು, ವಂಚನೆ ಮತ್ತು ಫೋರ್ಜರಿ ಆರೋಪದಡಿ ಭಾರತೀಯ ದಂಡ ಸಂಹಿತೆಯ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ವಿರಾಲ್ ಮೆಹ್ತಾ, ಅನೂಪ್ ಅಗರ್ವಾಲ್, ಮನ್ಸೂರ್ ಸಿದ್ದೀಕಿ ಮತ್ತು ಚೇತನ್ ಶ್ರೀವಾಸ್ತವ ಚಾರ್ಜ್‌ಶೀಟ್‌ನಲ್ಲಿರುವ ಇತರೆ ಹೆಸರುಗಳಾಗಿವೆ.
ಪಂಜಾಬ್ ಮೂಲದ ಟಿಎಸ್‌ಪಿಎಲ್ ಕಂಪನಿಯು 1980 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚೀನಾದ ಶಾಂಡೋಂಗ್ ಎಲೆಕ್ಟ್ರಿಕ್ ಪವರ್ ಕನ್‌ಸ್ಟ್ರಕ್ಷನ್ ಕಾರ್ಪ್‌ಗೆ(ಎಸ್‌ಇಪಿಸಿಒ) ಹೊರಗುತ್ತಿಗೆ ನೀಡಿತ್ತು ಎಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಕಾಲಮಿತಿಯೊಳಗೆ ಯೋಜನೆಯು ಪೂರ್ಣಗೊಳ್ಳದ ಕಾರಣ, ಕಂಪನಿಯು ದಂಡ ತೆರಬೇಕಾದ ಭೀತಿ ಎದುರಿಸುತ್ತಿತ್ತು.
ವಿಳಂಬಕ್ಕಾಗಿ ದಂಡದ ಕ್ರಮಗಳನ್ನು ತಪ್ಪಿಸಲು ಟಿಎಸ್‌ಪಿಎಲ್ ಹೆಚ್ಚು ಹೆಚ್ಚು ಚೀನೀ ವ್ಯಕ್ತಿಗಳು ಮತ್ತು ವೃತ್ತಿಪರರನ್ನು ತಮ್ಮ ಕಂಪನಿಗೆ ಕರೆತರಬೇಕಿತ್ತು. ಹೀಗಾಗಿ, ಗೃಹ ಸಚಿವಾಲಯ ವಿಧಿಸಲಾಗಿದ್ದ ಗರಿಷ್ಠ ಮಿತಿಗಿಂತ ಅಧಿಕ ಸಂಖ್ಯೆಯ ಪ್ರಾಜೆಕ್ಟ್ ವೀಸಾಗಳ ಅಗತ್ಯವಿತ್ತು. ಇದಕ್ಕಾಗಿ, ಭಾಸ್ಕರರಾಮನ್ ಮೂಲಕ ಟಿಎಸ್‌ಪಿಎಲ್ ಅಧಿಕಾರಿಗಳು ಕಾರ್ತಿ ಚಿದಂಬರಂ ಅವರನ್ನು ಸಂಪರ್ಕಿಸಿ ಅಕ್ರಮ ಎಸಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಹಿಂದಿನ ಬಾಗಿಲ ಮೂಲಕ ಗರಿಷ್ಠ ವೀಸಾ ಮಿತಿ ಮೀರಿ 263 ಪ್ರಾಜೆಕ್ಟ್ ವೀಸಾಗಳನ್ನು ಮರುವಿತರಣೆ ಮಾಡಲಾಗಿದೆ ಎಂದೂ ಸಿಬಿಐ ಹೇಳಿದೆ.
ವಿದ್ಯುತ್ ಮತ್ತು ಉಕ್ಕು ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡಲು 2010ರಲ್ಲಿ ವಿಶೇಷ ರೀತಿಯ ಪ್ರಾಜೆಕ್ಟ್ ವೀಸಾ ಪರಿಚಯಿಸಲಾಗಿದ್ದು, ಚಿದಂಬರಂ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗಿತ್ತು.