ವಯನಾಡ್: ಎಲ್ಲರೂ ತಿರುಗಿ ಬಿದ್ದರೂ ನೀವು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕೈ ಹಿಡಿದಿದ್ದೀರಿ ಎಂದು ತನ್ನ ಸಹೋದರನಿಗೆ ವಯನಾಡ್ ಜನತೆ ನೀಡಿದ ಬೆಂಬಲದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಬುಧವಾರ) ಪ್ರಸ್ತಾಪಿಸಿದ್ದಾರೆ.
ವಯನಾಡ್: ಎಲ್ಲರೂ ತಿರುಗಿ ಬಿದ್ದರೂ ನೀವು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕೈ ಹಿಡಿದಿದ್ದೀರಿ ಎಂದು ತನ್ನ ಸಹೋದರನಿಗೆ ವಯನಾಡ್ ಜನತೆ ನೀಡಿದ ಬೆಂಬಲದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಬುಧವಾರ) ಪ್ರಸ್ತಾಪಿಸಿದ್ದಾರೆ.
ವಯನಾಡ್‌ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಈ ಕ್ಷೇತ್ರದ ಜನತೆಯ ನಿರಂತರ ಬೆಂಬಲವನ್ನು ಉಲ್ಲೇಖಿಸಿದರು.
'ನನ್ನ ಜವಾಬ್ದಾರಿ ಏನೆಂಬುದು ಗೊತ್ತಿದೆ. ನನ್ನ ಸಹೋದರನ ಮೇಲಿನ ಪ್ರೀತಿಯಿಂದಲೂ ನೀವು ಇಲ್ಲಿಗೆ ಬಂದಿದ್ದೀರಿ ಎಂಬುದು ನನಗೆ ತಿಳಿದಿದೆ' ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಈ ಕ್ಷೇತ್ರ ಬಿಟ್ಟುಕೊಡುವುದು ಎಷ್ಟು ಕಠಿಣವಾದ ನಿರ್ಧಾರವಾಗಿತ್ತು ಎಂದು ನನಗೆ ತಿಳಿದಿದೆ ಎಂದು ಅವರು ಹೇಳಿದರು.
'ಎಲ್ಲರೂ ತಿರುಗಿ ಬಿದ್ದರೂ, ನೀವು ಅವರ (ರಾಹುಲ್) ಬೆಂಬಲಕ್ಕೆ ನಿಂತಿದ್ದೀರಿ. ಏಕತೆ ಹಾಗೂ ಶಾಂತಿಗಾಗಿ ದೇಶದಾದ್ಯಂತ ನಡೆಯಲು ಅವರಿಗೆ ನೀವು ಶಕ್ತಿ ತುಂಬಿದ್ದೀರಿ' ಎಂದು ಅವರು ಉಲ್ಲೇಖಿಸಿದರು.
'ವಯನಾಡ್ ಜನರೊಂದಿಗೆ ರಾಹುಲ್ ಅವರಿಗೆ ಗಾಢವಾದ ಸಂಬಂಧವಿದೆ. ಸಾರ್ವಜನಿಕವಾಗಿ ಮಾತ್ರವಲ್ಲದೆ ಖಾಸಗಿಯಾಗಿಯೂ ವಯನಾಡ್ ನನ್ನ ಕುಟುಂಬದವರು ಎಂದು ಹೇಳುತ್ತಾರೆ. ಒಬ್ಬ ಮತದಾರರನ್ನಾಗಿ ಅವರು ನಿಮ್ಮನ್ನು ಕಾಣುತ್ತಿಲ್ಲ. ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ಇಂದು ನಾವು ದೊಡ್ಡ ಹೋರಾಟವನ್ನೇ ನಡೆಸುತ್ತಿದ್ದೇವೆ. ರಾಹುಲ್ ಈ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ನಾವೆಲ್ಲರೂ ಈ ದೇಶದ ಮೌಲ್ಯಗಳಿಗಾಗಿ ಹೋರಾಡುತ್ತಿದ್ದೇವೆ. ಸಂವಿಧಾನದ ಮೌಲ್ಯಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ, ಸಮಾನತೆಗಾಗಿ, ಸತ್ಯಕ್ಕಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನೀವೆಲ್ಲರೂ ಸೈನಿಕರಾಗಿದ್ದೀರಿ. ನನ್ನಂತೆಯೇ ನಿಮಗೂ ಈ ದೇಶದ ಮೇಲೆ ಜವಾಬ್ದಾರಿ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಸತ್ಯದ ಪರ ನಿಲ್ಲಬೇಕಾದ ಸಮಯ ಇದಾಗಿದೆ. ನಿಮ್ಮ ಪ್ರತಿಯೊಂದು ಮತವು ಸತ್ಯದ ಪರ ನಿಲ್ಲಲಿದೆ' ಎಂದು ಅವರು ಹೇಳಿದ್ದಾರೆ.