HEALTH TIPS

ಬಾರಾಮುಲ್ಲಾದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ: ನಾಲ್ವರು ಸಾವು

 ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಮೃತರಲ್ಲಿ ಇಬ್ಬರು ಯೋಧರೂ ಸೇರಿದ್ದಾರೆ.

ಪಾಕಿಸ್ತಾನ ಗಡಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಗುಲ್ಮಾರ್ಗ್‌ನಿಂದ 6 ಕಿ.ಮೀ ದೂರದಲ್ಲಿರುವ ಬೋಟಾ ಪಥ್ರಿ ಎಂಬಲ್ಲಿ ಘಟನೆ ನಡೆದಿದೆ.

ಸೇನಾ ವಾಹನವು ನಾಗಿನ್‌ಗೆ ತೆರಳುತ್ತಿದ್ದ ವೇಳೆ ಉಗ್ರರು ಸಂಚು ದಾಳಿ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿದ್ದ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಒಬ್ಬ ಯೋಧ ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪೀಪಲ್ಸ್‌ ಆಯಂಟಿ ಫ್ಯಾಸಿಸ್ಟ್‌ ಫ್ರಂಟ್‌ (ಪಿಎಎಫ್‌ಎಫ್‌) ಎಂಬ ಉಗ್ರಗಾಮಿ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಸಂಘಟನೆಯು ಪಾಕಿಸ್ತಾನ ಮೂಲದ ಜೈಶ್‌-ಎ-ಮೊಹಮ್ಮದ್‌ ಗುಂಪಿನ ಭಾಗವೆಂದು (ಆಫ್‌ಶೂಟ್‌) ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರರಿಗಾಗಿ ಭಾರಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದಕ್ಕಾಗಿ ಸ್ಥಳದಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸೇನೆ ಮತ್ತು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ. ದಾಳಿ ನಡೆದಿರುವ ಸುತ್ತಲಿನ ಪ್ರದೇಶದಲ್ಲಿ ಎಲ್ಲ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದ್ದು, ಡ್ರೋನ್‌ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಸ್ಥಳೀಯ ಅರಣ್ಯದಲ್ಲಿ ಶೋಧ ನಡೆಸಲಾಗುತ್ತಿದೆ. ಘಟನೆ ಬಳಿಕ ಸ್ಥಳದಿಂದ ಗುಲ್ಮಾರ್ಗ್‌ನಲ್ಲಿರುವ ಕೇಬಲ್‌ ಕಾರ್‌ ರೋಪ್‌ ವೇ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಭದ್ರತಾ ಪರಿಶೀಲನೆ ಬಳಿಕ ಪುನಾರಂಭಿಸಲಾಯಿತು ಎಂದು ಪೊಲೀಸ್‌ ಹಾಗೂ ಸೇನಾಧಿಕಾರಿಗಳು ಮಾಹಿತಿ ನೀಡಿದರು.

ಈ ಪ್ರದೇಶವು ಸಂಪೂರ್ಣವಾಗಿ ಸೇನಾ ಪ್ರಾಬಲ್ಯದಲ್ಲಿದೆ. ಆದರೆ ಬೇಸಿಗೆ ವೇಳೆ ಉಗ್ರರು ನುಗ್ಗಿದ್ದಾರೆ. ಅಪಹರವಾಟ್ ಶ್ರೇಣಿಯ ಎತ್ತರದ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಬೋಟಾ ಪಥ್ರಿ ಪ್ರದೇಶವನ್ನೂ ಇತ್ತೀಚೆಗೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.

***

ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾದ ಸುದ್ದಿ ಅತ್ಯಂತ ದುಖಃಕರವಾಗಿದೆ. ಇಬ್ಬರು ಸೇನಾ ಸಿಬ್ಬಂದಿಯೂ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಸಮಾಜದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆ ಸ್ವೀಕಾರಾರ್ಹವಲ್ಲ

- ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ ನಾಯಕಿ

ಒಮರ್ ಅಬ್ದುಲ್ಲಾ ಆತಂಕ

ಘಟನೆ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು 'ಇತ್ತೀಚೆಗಿನ ದಾಳಿಗಳ ಸರಣಿಯು ಗಂಭೀರ ವಿಷಯವಾಗಿದೆ. ಪಾಕಿಸ್ತಾನವು ಇಂತಹ ಕೃತ್ಯವನ್ನು ನಿಲ್ಲಿಸಬೇಕು. ಭಾರತ ಹಾಗೂ ಪಾಕಿಸ್ತಾನ ಮಾತುಕತೆ ನಡೆಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸದ ಹೊರತು ಇಂತಹ ಪ್ರಕರಣಗಳು ಮರುಕಳಿಸಲಿವೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ನಡೆದ ನಾಲ್ಕನೇ ಉಗ್ರ ದಾಳಿ ಇದಾಗಿದೆ. ಗಂದರ್‌ಬಾಲ್‌ ಜಿಲ್ಲೆಯಲ್ಲಿ ಉಗ್ರರು ಭಾನುವಾರ ನಡೆಸಿದ ದಾಳಿಯಲ್ಲಿ ಆರು ಕಾರ್ಮಿಕರು ಹಾಗೂ ಸ್ಥಳೀಯ ವೈದ್ಯರೊಬ್ಬರು ಸಾವಿಗೀಡಾಗಿದ್ದರು. ಅ.18ರಂದು ಶೋಪಿಯಾನ್‌ ಜಿಲ್ಲೆಯಲ್ಲಿ ಬಿಹಾರದ ಒಬ್ಬ ಕಾರ್ಮಿಕ ಮೃತಪಟ್ಟಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries