ಕಾಸರಗೋಡು: ಮಂಜೇಶ್ವರ ವಿಧಾನಸಬಾ ಕ್ಷೇತ್ರದ ಚುನಾವಣೆ ಸಂದರ್ಭ ಸಲ್ಲಿಕೆಯಾಗಿದ್ದ ಚುನಾವಣಾ ತಕಾರಾರು ಅರ್ಜಿಗೆ ಸಂಬಂಧಿಸಿ ಆರೋಪಿಗಳೆನ್ನಲಾದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಆರು ಮಂದಿಯನ್ನು ಖುಲಾಸೆಗೊಳಿಸಿದ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ತೀರ್ಪಿಗೆ ಕೇರಳ ಉಚ್ಚ ನ್ಯಾಯಲಯ ತಡೆಯಾಜ್ಞೆ ನೀಡಿದೆ.
ಮಂಜೇಶ್ವರ ವಿಧಾನಸಭಾ ಚುನಾವಣೆ ಸಂದರ್ಭ ತಮ್ಮ ಮೇಲೆ ಸಲ್ಲಿಕೆಯಾಗಿದ್ದ ಲಂಚ ಪ್ರಕರಣವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿವಾದಿ ಕೆ. ಸುರೇಂದ್ರನ್ ಹಾಗೂ ಇತರರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಮುಂಡರಾದ ವಿ. ಬಾಲಕೃಷ್ಣ ಶೆಟ್ಟಿ, ಸುನಿಲ್ ನಾಯ್ಕ್, ಮಣಿಕಂಠ ರೈ, ವೈ. ಸುರೇಶ್ ಹಾಗೂ ಲೋಕೇಶ್ ನೋಂಡ ಎಂಬವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಹೈಕೋರ್ಟಿಗೆ ರಿವಿಶನ್ ಪಿಟಿಶನ್ ಸಲ್ಲಿಸಿ, ಕೆಳ ನ್ಯಾಯಾಲಯದ ತೀರ್ಪು ರದ್ದುಪಡಿಸುವಂತೆ ಕೋರಿತ್ತು. ಅರ್ಜಿ ಪರಿಗಣಿಸಿದ ಹೈಕೋರ್ಟು ನ್ಯಾಯಮೂರ್ತಿ ಕೆ. ಬಾಬು ತೀರ್ಪಿಗೆ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯನ್ನು ನ. 8ಕ್ಕೆ ಮುಂದೂಡಿದ್ದಾರೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿಯಾಗಿದ್ದ ಸುಂದರ ಅವರಿಗೆ ಎರಡೂವರೆ ಲಕ್ಷ ರೂಪಾಯಿ ಮತ್ತು ಸ್ಮಾರ್ಟ್‍ಫೆÇೀನ್ ನೀಡಿ ಚುನಾವಣೆಯಿಂದ ಹಿಂದಕ್ಕೆ ಸರಿಯುವಂತೆ ಬಿಜೆಪಿ ಮುಖಂಡರು ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದಿಂದ ಸ್ಪರ್ಧಿಸಿದ್ದ ವಿ.ವಿ ರಮೇಶನ್ ಬದಿಯಡ್ಕ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಲಾಗಿತ್ತು. ತಮ್ಮ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ವಾಸ್ತವ ವಿರುದ್ಧವಾಗಿದ್ದು, ಕಾನೂನು ಪ್ರಕಾರ ಇದು ನೆಲೆನಿಲ್ಲದೆಂದೂ, ಪ್ರಕರಣವನ್ನು ರದ್ದುಪಡಿಸುವಂತೆಯೂ ಕೋರಿ ಕೆ.ಸುರೇಂದ್ರನ್ ಸೇರಿದಂತೆ ಇತರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಎಡರಂಗ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ವಿ ರಮೇಶನ್ ಎಂಬವರು ನೀಡಿದ ದೂರು ಇದಾಗಿದ್ದು,ನಂತರ ಸುಂದರ ಅವರನ್ನು ಕೇಸಿನಲ್ಲಿ ಸೇರ್ಪಡೆಗೊಳಿಸಿ, ಗೂಢಾಲೋಚನೆ ನಡೆಸಲಾಗಿದೆ. ಸಿಪಿಎಂ, ಕಾಂಗ್ರೆಸ್, ಮುಸ್ಲಿಂಲೀಗ್ ಮುಖಂಡರೂ ಗೂಢಾಲೋಚನೆಯಲ್ಲಿ ಶಾಮೀಲಾಗಿದ್ದಾರೆ. ನನ್ನನ್ನು ಹಾಗೂ ಬಿಜೆಪಿಯನ್ನು ಚುನಾವಣೆಯಲ್ಲಿ ಪರಾಭವಗೊಳಿಸಲು ಈ ಎಲ್ಲಾ ಪಕ್ಷಗಳೂ ಪಿತೂರಿ ನಡೆಸಿರುವುದಾಗಿಯೂ ಸುರೇಂದ್ರನ್ ಆರೋಪಿಸಿದ್ದರು.