ಕಾಸರಗೋಡು: ಅನಂತಪುರಂ ಇಂಡಸ್ಟ್ರಿಯಲ್ ಪಾರ್ಕ್‍ನಲ್ಲಿ ಏಳು ಹೊಸ ಯೋಜನೆಗಳ ಉದ್ಘಾಟನೆ ಮತ್ತು ಆರು ಕೈಗಾರಿಕಾ ಉದ್ಯಮಗಳಿಗೆ ಶಿಲಾನ್ಯಾಸ ನಡೆಸುವ ಮೂಲಕ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಕೈಗಾರಿಕಾ ಖಾತೆ ಸಚಿವ ಪಿ. ರಾಜೀವನ್ ತಿಳಿಸಿದ್ದಾರೆ. ಅವಬರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೆಂಪುಕಲ್ಲು ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜರ್ಮನ್ ಅನುದಾನಿತ ತ್ಯಾಜ್ಯ ನಿರ್ವಹಣಾ ಕಂಪನಿಯ ಉದ್ಘಾಟನೆಯೊಂದಿಗೆ ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದನ್ನು ಸಾಬೀತುಪಡಿಸಿದೆ. ಅಭಿವೃದ್ಧೀಕಾರ್ಯಗಳಿಗೆ ಕೆಂಪುಕಲ್ಲು ಕ್ವಾರಿ ಕ್ಷೇತ್ರವೂ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೂ ಅಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳ ಸೂಚನೆಯಂತೆ ಕೆಂಪುಕಲ್ಲು ದರ ಸೇರಿದಂತೆ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ವಿಶೇಷ ಸಮಿತಿಯನ್ನು ನೇಮಿಸಲಾಗಿದ್ದು, ಅಧ್ಯಯನ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ದರಗಳಲ್ಲಿ ಬದಲಾವಣೆ ಇತ್ಯಾದಿಗಳನ್ನು ಒಳಗೊಂಡಿರುವ ಸಮಿತಿಯ ಶಿಫಾರಸುಗಳನ್ನು ಸರ್ಕಾರವು ಪರಿಗಣಿಸುತ್ತಿದ್ದು, ಶೀಘ್ರದಲ್ಲೇನಿರ್ಧಾರವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಅಗತ್ಯ. ಇದರಲ್ಲಿ ಪ್ರಾಯೋಗಿಕವಲ್ಲದ ಕೆಲವೊಂದು ವಿಷಯಗಳನ್ನು ಶಾಸಕರು ಸೂಚಿಸಿದ್ದು, ಈ ಸಮಸ್ಯೆಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತರಲಾಗುವುದು. ಈ ಪ್ರದೇಶದಲ್ಲಿ ಖನಿಜಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಖನಿಜ ಸಂಪತ್ತಿನ ಕುರಿತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವಿಶೇಷ ಅಧ್ಯಯನ ನಡೆಸಿದ್ದು, ಮುಖ್ಯಮಂತ್ರಿಯವರ 'ನೂತನ ಕೇರಳ' ಸಭೆಯಲ್ಲಿ ಜಿಲ್ಲೆಯಿಂದ ಪ್ರಸ್ತಾಪಿಸಲಾದ ಪ್ರಮುಖ ವಿಷಯಗಳಲ್ಲಿ ಇದೂ ಒಂದಾಗಿದೆ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಎಚ್.ಕುಞಂಬು, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು, ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆಮ್ ಎಸ್.ಸೋಮಶೇಖರ, ಪ್ರಧಾನ ಕಾರ್ಯದರ್ಶಿ ಪಿ.ಎಂ.ಮಹಮ್ಮದ್ ಹನೀಷ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಎಸ್‍ಐ ಪ್ರತಿನಿಧಿ ಡಾ.ಅಂಬಿಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಡಾ.ಹರಿಕುಮಾರ್, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಪಸ್ಥಿತರಿದ್ದರು.