ವಿಶ್ವಸಂಸ್ಥೆ: ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸದಸ್ಯರು ಗಾಯಗೊಂಡಿರುವ ಘಟನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಲೆಬನಾನ್‌ನಲ್ಲಿರುವ ಶಾಂತಿಪಾಲನಾ ಪಡೆಯ (ಯುಎನ್‌ಐಎಫ್‌ಐಎಲ್) ನೆಲೆಯ ಮೇಲೆ ಕಳೆದ ವಾರ ನಡೆದ ದಾಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ.
ಶಾಂತಿಪಾಲನಾ ಪಡೆಯನ್ನು ಈಗ ಇರುವ ತಾಣಗಳಲ್ಲೇ ಮುಂದುವರಿಸಲಾಗುವುದು ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಭೂಸೇನಾ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಸೇನೆ, ಶಾಂತಿಪಾಲನಾ ಪಡೆಯ ಸದಸ್ಯರಿಗೆ ತಾವು ಇರುವ ಸ್ಥಳದಿಂದ 5 ಕಿ.ಮೀ. ನಷ್ಟು ಉತ್ತರಕ್ಕೆ ತೆರಳುವಂತೆ ಸೂಚಿಸಿತ್ತು.
'ಯುಎನ್‌ಐಎಫ್‌ಐಎಲ್ ಸಿಬ್ಬಂದಿ ಮತ್ತು ವಿಶ್ವಸಂಸ್ಥೆಗೆ ಸೇರಿದ ಆವರಣದ ಸುರಕ್ಷತೆ ಮತ್ತು ಭದ್ರತೆಯನ್ನು ಗೌರವಿಸುವಂತೆ ಸಂಬಂಧಪಟ್ಟ ಎಲ್ಲರನ್ನೂ ಕೇಳಿಕೊಳ್ಳುತ್ತೇವೆ' ಎಂದು ಭದ್ರತಾ ಮಂಡಳಿಯ ಪ್ರಕಟಣೆ ತಿಳಿಸಿದೆ. ಆದರೆ ತನ್ನ ಪ್ರಕಟಣೆಯಲ್ಲಿ ಇಸ್ರೇಲ್, ಲೆಬನಾನ್ ಅಥವಾ ಹಿಜ್ಬುಲ್ಲಾ ಒಳಗೊಂಡಂತೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
ವಿಶ್ವಸಂಸ್ಥೆಯಲ್ಲಿರುವ ಅಮೆರಿಕದ ಡೆಪ್ಯುಟಿ ರಾಯಭಾರಿ ರಾಬರ್ಟ್ ವುಡ್, 'ಸದ್ಯ ಜಗತ್ತಿನ ಎಲ್ಲೆಡೆಯಿರುವ ಜನರ ಮನಸ್ಸಿನಲ್ಲಿ ಏನಿದೆಯೋ, ಅದೇ ವಿಷಯದ ಕುರಿತು ಭದ್ರತಾ ಮಂಡಳಿ ಒಮ್ಮತದಿಂದ ಮಾತನಾಡಿರುವುದು ಉತ್ತಮ ಬೆಳವಣಿಗೆ' ಎಂದು ಪ್ರತಿಕ್ರಿಯಿಸಿದ್ದಾರೆ.
'ಭದ್ರತಾ ಮಂಡಳಿಯು ನಿಮ್ಮ ಮೇಲೆ ಕಾಳಜಿ ವಹಿಸಿದೆ. ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂಬ ಸಂದೇಶವನ್ನು ಲೆಬನಾನ್‌ನ ಜನರಿಗೆ ನೀಡಲು ಸಾಧ್ಯವಾಗಿದೆ' ಎಂದಿದ್ದಾರೆ.
ಉನ್ನತ ಮಟ್ಟದ ತನಿಖೆ: 'ಕಾರ್ಯಾಚರಣೆ ವೇಳೆ ಶಾಂತಿಪಾಲನಾ ಪಡೆಯ ಸದಸ್ಯರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಇಸ್ರೇಲ್ ಪ್ರಯತ್ನಿಸಿದೆ. ಶಾಂತಿಪಾಲನಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದರೆ, ಆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು' ಎಂದು ಇಸ್ರೇಲ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೊಶಾನಿ ಹೇಳಿದ್ದಾರೆ.