ನವದೆಹಲಿ: ತೀವ್ರ ಅಗತ್ಯವಿರುವ ಒಂಭತ್ತು ಅತಿ ಗಣ್ಯ ವ್ಯಕ್ತಿಗಳ ಭದ್ರತೆ ಒದಗಿಸುವ ಹೊಣೆಯನ್ನು ನವೆಂಬರ್‌ನಿಂದ ಎನ್‌ಎಸ್‌ಜಿ ಕಮಾಂಡೊಗಳಿಂದ ಸಿಆರ್‌ಪಿಎಫ್ ಯೋಧರಿಗೆ ವಹಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಇಲಾಖೆಯು ಈ ಆದೇಶ ಹೊರಡಿಸಿದ್ದು, ವಿಐಪಿ ಭದ್ರತೆಗೆ ಇತ್ತೀಚೆಗೆ ಸಂಸತ್ ಭವನ ಭದ್ರತೆ ಒದಗಿಸುವ ಕರ್ತವ್ಯದಿಂದ ಬಿಡುಗಡೆಗೊಂಡು, ವಿಶೇಷ ತರಬೇತಿ ಪಡೆದ ತಂಡಕ್ಕೆ ವಹಿಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಎಸ್‌ಪಿ ನಾಯಕಿ ಮಾಯಾವತಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾನಿ, ಕೇಂದ್ರ ಬಂದರು ಸಚಿವ ಸರಬಾನಂದ ಸೋನೊವಾಲಾ, ಬಿಜೆಪಿ ಮುಖಂಡ ರಮಣ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇವರಿಗೆ ರಾಷ್ಟ್ರೀಯ ಭದ್ರತಾ ದಳಕ್ಕೆ (ಎನ್‌ಎಸ್‌ಜಿ) ಸೇರಿದ ಬ್ಲಾಕ್ ಕ್ಯಾಟ್ ಕಮಾಂಡೊಗಳು ಝಡ್ ಪ್ಲಸ್ ಭದ್ರತೆ ಒದಗಿಸುತ್ತಿದ್ದರು.
ನವೆಂಬರ್‌ನಿಂದ ಭದ್ರತೆ ಒದಗಿಸುವ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಒದಗಿಸಲಿದೆ. ವಿಐಪಿಗಳಿಗೆ ಭದ್ರತೆ ಒದಗಿಸಲು ಆರು ವಿಐಪಿ ಭದ್ರತಾ ತುಕಡಿಯನ್ನು ಇದು ಹೊಂದಿದೆ. ನೂತನ ಜವಾಬ್ದಾರಿಗಾಗಿ ಏಳನೇ ತುಕಡಿಗೆ ಕೋರಿಕೆ ಸಲ್ಲಿಸಿತ್ತು. ನೂತನ ತುಕಡಿಯು ಈ ಮೊದಲು ಸಂಸತ್ ಭವನಕ್ಕೆ ಭದ್ರತೆ ಒದಗಿಸುತ್ತಿತ್ತು. ಸಂಸತ್ ಭವನದಲ್ಲಿ ಕಳೆದ ವರ್ಷ ಉಂಟಾದ ಭದ್ರತಾ ಲೋಪದ ನಂತರ, ಅಲ್ಲಿನ ಹೊಣೆಯನ್ನು ಸಿಆರ್‌ಪಿಎಫ್‌ನಿಂದ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಗೃಹ ಇಲಾಖೆ ವಹಿಸಿತ್ತು.
ಈ ಒಂಭತ್ತು ಅತಿ ಗಣ್ಯ ವ್ಯಕ್ತಿಗಳಲ್ಲಿ ಯೋಗಿ ಆದಿತ್ಯನಾಥ್ ಹಾಗೂ ರಾಜನಾಥ ಸಿಂಗ್ ಅವರು ಸಿಆರ್‌ಪಿಎಫ್ ಭದ್ರತೆಯ ಜತೆಗೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನೂ ಹೊಂದಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯು ಸದ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಒದಗಿಸಲಾಗಿದೆ.
2012ರಿಂದ ಎನ್‌ಎಸ್‌ಜಿ ಕಮಾಂಡೊಗಳು ಅತಿ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುತ್ತಿದ್ದರು. ಆದರೆ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕಮಾಂಡೊಗಳ ಅವಶ್ಯಕತೆ ಇರುವುದರಿಂದ ಅವರನ್ನು ಸದ್ಯ ವಿಐಪಿ ಭದ್ರತೆ ಒದಗಿಸುತ್ತಿರುವ 450 ಬ್ಲಾಕ್ ಕ್ಯಾಟ್ ಕಮಾಂಡೊಗಳು ಮಾತೃ ಸಂಸ್ಥೆಯ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.