ಮುಂಬೈ: ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮರಾಠ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಜಾತಿ ವಿವಾದಗಳು ಮೇಲುಗೈ ಸಾಧಿಸುವ ಲಕ್ಷಣಗಳು ಗೋಚರಿಸಿವೆ.
2024ರ ಲೋಕಸಭಾ ಚುನಾವಣೆ ಮೇಲೂ ಜಾತಿ ವಿವಾದಗಳ ಪ್ರಭಾವ ಆವರಿಸಿದ್ದವು. ವಿಧಾನಸಭಾ ಚುನಾವಣೆಯಲ್ಲೂ ಅವುಗಳ ಪ್ರಭಾವ ಇನ್ನಷ್ಟು ವ್ಯಾಪಕವಾಗಿ ಬೀರಲಿವೆ.
ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೇ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಮತ್ತು ಒಬಿಸಿ ಸಂಘಟನಾ ಸೇನಾದ ಸಂಸ್ಥಾಪಕ ಪ್ರೊ. ಲಕ್ಷ್ಮಣ್ ಹಾಕೆ ಅವರು ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ.
ಇವು ಮಹಾರಾಷ್ಟ್ರದ ಆಡಳಿತಾರೂಢ 'ಮಹಾಯುತಿ' ಮತ್ತು ವಿರೋಧ ಪಕ್ಷಗಳ 'ಮಹಾ ವಿಕಾಸ ಅಘಾಡಿ' ಮೈತ್ರಿಗೆ ಸವಾಲಾಗಿ ಪರಿಣಮಿಸಿವೆ.
ಮರಾಠ ಮೀಸಲಾತಿಗೆ ಆಗ್ರಹಿಸಿ 14 ತಿಂಗಳಲ್ಲಿ ಏಳು ಬಾರಿ ಉಪವಾಸ ನಿರಶನ ಮಾಡಿರುವ ಜಾರಂಗೆ ಅವರು, 'ನಾನು ವೈಯಕ್ತಿಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಚುನಾವಣೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಮರಾಠ ಸಮಾಜ ಸಭೆ ಸೇರಲಿದೆ' ಎಂದು ಹೇಳಿದ್ದಾರೆ.
'ನಾವು ಬಹಳ ಸ್ಪಷ್ಟವಾಗಿದ್ದೇವೆ. ನಮ್ಮ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಚುನಾವಣೆ ಘೋಷಣೆ ಮತ್ತು ನೀತಿ ಸಂಹಿತೆ ಜಾರಿಗೂ ಮುನ್ನ ನಿರ್ಧಾರ ತೆಗೆದುಕೊಳ್ಳೂವಂತೆ ಈಗಾಗಲೇ ಸರ್ಕಾರಕ್ಕೆ ಗಡುವು ನೀಡಿದ್ದೆವು. ಅದೀಗ ಮುಗಿದಿದೆ' ಎಂದು ಹೇಳುವ ಮೂಲಕ ರಾಜಕೀಯದಲ್ಲಿ ಮಹತ್ವದ ಪಾತ್ರವಹಿಸುವ ಸೂಚನೆಯನ್ನು ಅವರು ನೀಡಿದ್ದಾರೆ.
'ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಾವೆಲ್ಲರೂ ಒಗ್ಗೂಡಬೇಕಿದ್ದು, ಅದಕ್ಕಾಗಿ ಸಿದ್ಧರಾಗಿ' ಎಂದು ಮನವಿ ಮಾಡಿದ ಅವರು, ಮರಾಠರಿಗೆ ಮೀಸಲಾತಿಯನ್ನು ಬಿಜೆಪಿಯ ನಾಯಕ, ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಎರಡು ಬಾರಿ ಉಪವಾಸ ನಿರಶನ ನಡೆಸಿರುವ ಒಬಿಸಿ ನಾಯಕ ಲಕ್ಷ್ಮಣ ಹಾಕೆ ಅವರು, 'ಈ ಚುನಾವಣೆಯಲ್ಲಿ ಎಲ್ಲ ಒಬಿಸಿ ಸಮುದಾಯದವರೂ ಒಂದಾಗಿ, ಬಲ ಪ್ರದರ್ಶಿಸಬೇಕು' ಎಂದು ಕರೆ ನೀಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, 'ರಾಜಕೀಯ ಪಕ್ಷಗಳು ಮೊದಲು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ. ನಮ್ಮ ನಿಲುವು ಸ್ಪಷ್ಟವಿದೆ' ಎಂದಿದ್ದಾರೆ. ರಾಜ್ಯದಲ್ಲಿ ಜಾತಿ ರಾಜಕೀಯದ ಪ್ರಭಾವ ಹೆಚ್ಚುತ್ತಿರುವ ಕುರಿತ ಪ್ರಶ್ನೆಗೆ, 'ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ಸ್ಪರ್ಧಿಸುತ್ತಿದ್ದವು, ನಾವು ಈಗ ಬದಲಾವಣೆಗಳನ್ನು ಕಾಣುತ್ತೇವೆ' ಎಂದು ಉತ್ತರಿಸಿದ್ದಾರೆ.
ಮರಾಠ ಸಮುದಾಯದವರಿಗೆ ಒಬಿಸಿ ಅಡಿಯಲ್ಲಿ ಮೀಸಲಾತಿ ನೀಡಬೇಕು, 'ಸಗೆ-ಸೋಯಾರೆ' (ವಂಶವೃಕ್ಷದ ಸಂಬಂಧಿಕರು) ಕುರಿತು ಹೊರಡಿಸಿರುವ ಕರಡು ಅಧಿಸೂಚನೆಯನ್ನು ಜಾರಿಗೆ ತರಬೇಕು, ಮೀಸಲು ಕೋಟಾಗೆ ಆಗ್ರಹಿಸಿ ಹೋರಾಟ ನಡೆಸಿದವರ ಮೇಲೆ ಹೇರಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದು ಜಾರಂಗೆ ಅವರ ಪ್ರಮುಖ ಬೇಡಿಕೆಗಳಾಗಿವೆ.
ಇದರಿಂದ ಒಬಿಸಿ ಕೋಟಾ ದುರ್ಬಲವಾಗುತ್ತದೆ ಎಂದು ಒಬಿಸಿ ಸಮುದಾಯಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿವೆ.