ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣದ ಆರೋಪಿ, ಮಾಜಿ ಡಿವೈಎಫ್‍ಐ ನೇತಾರೆ ಹಾಗೂ ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‍ಪಿ ಶಾಲಾ ಶಿಕ್ಷಕಿ ಸಚಿತಾ ರೈ (27) ವಿರುದ್ಧ ಮತ್ತೆ ಎರಡು ಕೇಸು ದಾಖಲಾಗಿದ್ದು, ಈ ಮೂಲಕ ಪ್ರಕರಣ ಸಂಖ್ಯೆ 15ಕ್ಕೇರಿದೆ.
ಎಣ್ಮಕಜೆ ಪಂಚಾಯಿತಿಯ ಪೆರ್ಲ ಸನಿಹದ ಬೆದ್ರಂಪಳ್ಳ ನಿವಾಸಿ ಸಂದೀಪ್ ಹಾಗೂ ಎಣ್ಮಕಜೆಯ ನಯನ ಕುಮಾರಿ ಅವರ ದೂರಿನ ಮೇರೆಗೆ ಬದಿಯಡ್ಕ ಠಾಣೆ ಪೊಲೀಸರು ಸಚಿತಾ ರೈ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಕರ್ನಾಟಕ ಲೋಕೋಪಯೋಗಿ ಇಲಾಖೆ, ಅಥವಾ ಪೆಟ್ರೋಲಿಯಂ ಇಲಾಖೆಯಲ್ಲಿ ಕೆಲಸ ದೊರಕಿಸಿಕೊಡುವ ಭರವಸೆಯೊಂದಿಗೆ ತನ್ನಿಂದ 1283500 ರೂ. ನಗದು ಸಚಿತಾ ರೈ ಪಡೆದುಕೊಂಡಿರುವುದಾಗಿ ಸಂದೀಪ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗ ತೆಗೆಸಿಕೊಡುವ ಭರವಸೆಯೊಂದಿಗೆ ತನ್ನಿಂದ 1390000ರೂ. ಪಡೆದು ಉದ್ಯೋಗ ನೀಡದೆ, ಹಣವನ್ನೂ ವಾಪಾಸು ಮಾಡದೆ ವಂಚಿಸಿರುವುದಾಗಿ ನಯನ ಕುಮಾರಿ ಅವರು ಬದಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಸಚಿತಾ ರೈಗೆ ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಲಯ(ಪ್ರಥಮ)ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಸಕ್ತ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಕಳೆಯುತ್ತಿದ್ದಾಳೆ.