HEALTH TIPS

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌: ಮೈತ್ರಿ ತೆಕ್ಕೆಗೆ ಜಮ್ಮು-ಕಾಶ್ಮೀರ

 


ವದೆಹಲಿ: ಉತ್ತರ ಭಾರತದ ಎರಡು ಸಣ್ಣ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಸ್ಪಷ್ಟ ತೀರ್ಪು ನೀಡಿದ್ದಾರೆ. ಹರಿಯಾಣದಲ್ಲಿ ದಶಕದ ಆಡಳಿತ ವಿರೋಧಿ ಅಲೆಯಲ್ಲಿಯೇ ಈಜಿದ ಬಿಜೆಪಿಯು ಗೆಲುವಿನ ದಡ ಸೇರಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಜೆಕೆಎನ್‌ಸಿ)-ಕಾಂಗ್ರೆಸ್‌ ಮೈತ್ರಿಕೂಟ ಸರಳ ಬಹುಮತ ಪಡೆದಿದೆ.

ಎನ್‌ಡಿಎ ಹಾಗೂ 'ಇಂಡಿಯಾ' ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಪ್ರಾದೇಶಿಕ ಪಕ್ಷಗಳು ನೆಲ ಕಚ್ಚಿವೆ.

ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಬಹುಮತದ ಗಡಿ ತಲುಪಲಾಗದೆ ಅಲ್ಪ ಹಿನ್ನಡೆ ಸಾಧಿಸಿದ್ದ ಕಮಲ ಪಾಳಯ ವಿಧಾನಸಭೆಗಳ ಚುನಾವಣೆಯ ಅಗ್ನಿಪರೀಕ್ಷೆಯಲ್ಲಿ ಗೆದ್ದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇನ್ನೂ ಇದೆ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ. ಹರಿಯಾಣದಲ್ಲಿ ಸೋಲಿನ ದವಡೆಯಲ್ಲಿ ಸಿಲುಕುವ ಅಪಾಯದಿಂದ ಪಕ್ಷವನ್ನು ಪಾರು ಮಾಡಿರುವ ಅವರು 'ಹ್ಯಾಟ್ರಿಕ್‌' ಗೆಲುವಿನತ್ತ ಮುನ್ನಡೆಸಿದ್ದಾರೆ. ಹಿಂದಿ ಹೃದಯ ಸೀಮೆಯಲ್ಲಿ ತಮ್ಮ ಪಕ್ಷವನ್ನು ಕಟ್ಟಿ ಹಾಕುವುದು ಸುಲಭವಲ್ಲ ಎಂಬುದನ್ನು ಮೋದಿ- ಅಮಿತ್ ಶಾ ಜೋಡಿ ತೋರಿಸಿಕೊಟ್ಟಿದೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಆಕ್ರಮಣಕಾರಿಯಾಗಿದ್ದ 'ಇಂಡಿಯಾ' ಮೈತ್ರಿಕೂಟವನ್ನು ಎದುರಿಸಲು ಹಾಗೂ ಸರ್ಕಾರದ ನೀತಿ ನಿರೂಪಣೆಗಳ ಬಗ್ಗೆ ಆಗಾಗ ಒಡಕು ಮಾತುಗಳನ್ನು ಅಡುತ್ತಿದ್ದ ಮಿತ್ರ ಪಕ್ಷಗಳನ್ನು ಸಂಭಾಳಿಸಲು ಬಿಜೆಪಿಗೆ ಈ ಜನಾದೇಶ 'ಟಾನಿಕ್‌'ನಂತಾಗಿದೆ.

ದೇಶದ ಶಕ್ತಿ ಕೇಂದ್ರ ದೆಹಲಿಗೆ ಅಂಟಿಕೊಂಡೇ ಇರುವ 'ಸಂಪದ್ಭರಿತ' ಸಣ್ಣ ರಾಜ್ಯದಲ್ಲಿ ಗೆಲ್ಲುವ ಕಾಂಗ್ರೆಸ್‌ನ ಮಹದಾಸೆ ಭಗ್ನಗೊಂಡಿದೆ. ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಗಾದಿಗಾಗಿ ಹಿರಿಯ ನಾಯಕರು ನಡೆಸಿದ್ದ ಒಳ ಜಗಳಕ್ಕೆ ಪಕ್ಷ ತಕ್ಕ ಬೆಲೆ ತೆತ್ತಿದೆ. ಸೋಲಿನ ಸರಮಾಲೆಯ ಸುಳಿಯಿಂದ ಗೆಲುವಿನ ಹಳಿಗೆ ಜಿಗಿಯುವ ಸುವರ್ಣಾವಕಾಶವೊಂದನ್ನು ಪಕ್ಷ ಕೈಚೆಲ್ಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಬೆನ್ನೇರಿ ಅಧಿಕಾರದ ಗದ್ದುಗೆ ಹಿಡಿಯುವತ್ತ ಸಾಗಿರುವುದು ಕಾಂಗ್ರೆಸ್‌ ಪಾಲಿಗೆ ತೃಪ್ತಿಪಡುವ ವಿಷಯ.

ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭೆಗಳ ಚುನಾವಣೆಗಳು ಕದ ಬಡಿದಿರುವ ಈ ಹೊತ್ತಿನಲ್ಲಿ ಕಂಡುಬಂದಿರುವ ಈ ರಾಜಕೀಯ ಪಲ್ಲಟ ಕಾಂಗ್ರೆಸ್‌ ಪಾಲಿಗೆ ಶುಭ ಸುದ್ದಿಯಲ್ಲ. ಉಭಯ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಬದಲಿಸಬೇಕಾದ ಅನಿವಾರ್ಯತೆಯ ಸಂದೇಶವನ್ನು ಹರಿಯಾಣದ ಫಲಿತಾಂಶವು ರವಾನಿಸಿದೆ. 'ಗ್ಯಾರಂಟಿ' ಹಾಗೂ 'ಜಾತಿ ಗಣತಿ'ಯನ್ನಷ್ಟೇ ನಂಬಿಕೊಂಡು ಪ್ರಚಾರ ನಡೆಸಿದ್ದ 'ಕೈ' ಪಾಳಯದ ನಾಯಕರ ಕನಸಿಗೆ ಈ ಫಲಿತಾಂಶ ತಣ್ಣೀರು ಎರಚಿದೆ.

'ಹರಿಯಾಣದಲ್ಲಿ ಬಿಜೆಪಿಯನ್ನು ಕೆಡವಿ ಹಾಕಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ' ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಸಮೀಕ್ಷೆಗಳೆಲ್ಲ ಸುಳ್ಳಾಗಿವೆ. 1966ರಲ್ಲಿ ಹರಿಯಾಣ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ಯಾವುದೇ ಪಕ್ಷಕ್ಕೆ ಸತತ ಮೂರನೇ ಅವಧಿಗೆ ಗದ್ದುಗೆ ಏರಲು ಸಾಧ್ಯವಾಗಿರಲಿಲ್ಲ. ಇದೀಗ, ಈ ಶ್ರೇಯಕ್ಕೆ ಕೇಸರಿ ಪಾಳಯ ಪಾತ್ರವಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಮೇಲೆ ಕಣಿವೆ ರಾಜ್ಯದಲ್ಲಿ ಮೊದಲ ಬಾರಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟ ಗೆಲುವಿನ ನಗೆ ಬೀರಿದೆ. ಸಂವಿಧಾನದ 370ನೇ ವಿಧಿಯಡಿ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಿರ್ಧಾರವನ್ನೇ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಹಿಂದೂಗಳ ಪ್ರಾಬಲ್ಯದ ಜಮ್ಮುವಿನಲ್ಲಿ ಬಿಜೆಪಿಗೆ ಹಾಗೂ ಮುಸ್ಲಿಮರ ಬಾಹುಳ್ಯದ ಕಾಶ್ಮೀರದಲ್ಲಿ ಮೈತ್ರಿಕೂಟಕ್ಕೆ ಮತದಾರರು ಬಹುಪರಾಕ್‌ ಎಂದಿದ್ದಾರೆ. ಭಯೋತ್ಪಾದನಾ ಚಟುವಟಿಕೆಗಳಿಂದ ನಲುಗಿದ್ದ ರಾಜ್ಯದಲ್ಲಿ ಬಹುಮತದ ಸರ್ಕಾರ ರಚನೆಗೆ ಮತದಾರರು ಒಲವು ತೋರಿದ್ದಾರೆ. 'ಕಿಂಗ್‌ ಮೇಕರ್‌'ಗಳಾಗುವ ಕನಸು ಕಂಡ ಪಕ್ಷಗಳನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಎರಡೂ ರಾಜ್ಯಗಳಲ್ಲಿಯೂ ಚುನಾವಣಾ ನಿರ್ವಹಣೆಯ ಹೊಣೆಯನ್ನು ಬಿಜೆಪಿಯ ವರಿಷ್ಠ ನೇತಾರರೇ ಹೊತ್ತುಕೊಂಡಿದ್ದರು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಶಾಸಕರಿಗೆ ಪಕ್ಷ ಮುಲಾಜಿಲ್ಲದೆ ಟಿಕೆಟ್‌ ನಿರಾಕರಿಸಿತು. ಕಾಂಗ್ರೆಸ್‌ ಸರ್ಕಾರಗಳ 'ಗ್ಯಾರಂಟಿ' ಅನುಷ್ಠಾನದ ಲೋಪ ಹಾಗೂ ಭ್ರಷ್ಟಾಚಾರ ಪ್ರಕರಣಗಳನ್ನು ಪದೇ ಪದೇ ಪ್ರಸ್ತಾಪಿಸಿತು. ಹರಿಯಾಣಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಜಮ್ಮು ಮತ್ತು ಕಾಶ್ಮೀರಕ್ಕೆ ಹಿರಿಯ ನಾಯಕ ರಾಮ್‌ ಮಾಧವ್‌ ಅವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನಿಯೋಜಿಸಿ 'ಚಾಣಕ್ಯ' ನಡೆ ಇಟ್ಟಿತು. ಇದು ಉತ್ತಮ ಫಲ ಕೊಟ್ಟಿತು.

ಬಿಜೆಪಿ ಗೆದ್ದಿದ್ಹೇಗೆ..

  • ಹರಿಯಾಣದಲ್ಲಿ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಮುಖ್ಯಮಂತ್ರಿ ಬದಲಾವಣೆ ಮಾಡಲಾಯಿತು. ಒಬಿಸಿ ನಾಯಕ ನಾಯಬ್ ಸಿಂಗ್ ಸೈನಿ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲಾಯಿತು.

  • ಜೆಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿದ್ದು ಹಾಗೂ ಹೊಸ ಜಾತಿ ಸಮೀಕರಣದ ಸೂತ್ರ ಹೆಣೆಯಲಾಯಿತು. ಜಾಟೇತರ ಸಮುದಾಯದ ಮತಗಳ ಕ್ರೋಡೀಕರಣಕ್ಕೆ ಸಂಪೂರ್ಣ ಗಮನ ನೀಡಲಾಯಿತು.

  • ಗ್ರಾಮೀಣ ಭಾಗದ ಕ್ಷೇತ್ರಗಳ ಕಡೆಗೆ ಹೆಚ್ಚಿನ ಗಮನ ಹರಿಸಿ ತಳ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಪ್ರಯತ್ನ ಮಾಡಿತು. ಪ್ರಚಾರಕ್ಕಾಗಿ ಪ್ರತಿ ಜಿಲ್ಲೆಗೆ 150 ಆರ್‌ಎಸ್‌ಎಸ್‌ ಕಾರ್ಯಕರ್ತರ ನಿಯೋಜನೆ ಮಾಡಿತು.

  • ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಬಿಜೆಪಿಯು ಹರಿಯಾಣದ ಕಡೆಗೆ ಸಂಪೂರ್ಣ ಗಮನ ಹರಿಸಿತು.

'ಕೈ' ಎಡವಿದ್ದೆಲ್ಲಿ?

  • ಹರಿಯಾಣದಲ್ಲಿ ಜಾಟರ ಮತಗಳೇ ಗೆಲುವಿನ ದಡ ಮುಟ್ಟಿಸಬಲ್ಲವು ಎಂದು ಕಾಂಗ್ರೆಸ್‌ ಭಾವಿಸಿತ್ತು. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿತ್ತು. ಹೂಡಾ ಸೂಚಿಸಿದ್ದ 71 ಮಂದಿಗೆ ಟಿಕೆಟ್‌ ನೀಡಲಾಗಿತ್ತು. ದಲಿತ ಸಮುದಾಯದ ಪ್ರಭಾವಿ ನಾಯಕಿಯಾಗಿರುವ ಸಂಸದೆ ಕುಮಾರಿ ಶೆಲ್ಜಾ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಅವರು ಮುನಿಸಿಕೊಂಡು ಪ್ರಚಾರದಿಂದ ಅಂತರ ಕಾಯ್ದುಕೊಂಡರು. ಕಾಂಗ್ರೆಸ್‌ ನಾಯಕರ ಒಳ ಜಗಳವು ಬಿಜೆಪಿಗೆ ಪ್ರಮುಖ ಪ್ರಚಾರ ವಿಷಯವಾಯಿತು. ಪರಿಣಾಮವಾಗಿ, ಶೇ 20ರಷ್ಟಿದ್ದ ದಲಿತರ ಮತಗಳು ವಿಭಜನೆಯಾದವು.

  • ಚುನಾವಣಾ ಪೂರ್ವದಲ್ಲಿ ಬಿಜೆಪಿ 160 ರ‍್ಯಾಲಿಗಳನ್ನು ನಡೆಸಿತು. ಕಾಂಗ್ರೆಸ್ ಪಕ್ಷದ ರ‍್ಯಾಲಿಗಳ ಸಂಖ್ಯೆ 60 ದಾಟಿರಲಿಲ್ಲ. ಪಕ್ಷದ ತಾರಾ ಪ್ರಚಾರಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತಿತರರು ನಾಲ್ಕೈದು ರ‍್ಯಾಲಿಗಳಿಗೆ ಸೀಮಿತರಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries