ಮಂಜೇಶ್ವರ: ತೂಮಿನಾಡು ನಿವಾಸಿಗಳಾದ ಅನಿವಾಸಿ ಭಾರತೀಯರು ಬಡ ನಿರ್ಗತಿಕ ಕುಟುಂಬದವರಿಗೆ ಸಹಾಯ ನೀಡುವ ಉದ್ದೇಶದಿಂದ ಸಂಘಟಿಸಿದ ಬುಸ್ತಾನುಲ್ ಇಖ್ವಾನ್ ಸಂಘಟನೆಯ ಕಾರ್ಯಕರ್ತರು ಕಳೆದ ಕೆಲವು ವರ್ಷಗಳಿಂದ ತೂಮಿನಾಡು ಅಲ್ ಫತಾಃ ಜುಮಾ ಮಸೀದಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ಕೂ ಸಹಾಯ ಹಸ್ತವನ್ನು ನೀಡುತ್ತಾ ಬಂದಿದ್ದಾರೆ.
ಇದರ ಅಂಗವಾಗಿ ಮಸೀದಿಯ ಅಧೀನದಲ್ಲಿ ನಡೆದ ಮಿಲಾದುನ್ನಬಿ ವಿದ್ಯಾರ್ಥಿಗಳ ವಿವಿಧ ಸ್ವರ್ಧೆಯನ್ನು ಆಯೋಜಿಸಲಾದ ವೇದಿಕೆಯಲ್ಲಿ ಮರಣಿಸಿದ ವ್ಯಕ್ತಿಗಳನ್ನು ದಫನ ಮಾಡಲು ಖಬರ್ ತೋಡಿ ಉಚಿತ ಸೇವೆಯನ್ನು ನೀಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ವಿಶೇಷ ಗೌರವವನ್ನು ನೀಡಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಖಬರ್ ಸ್ಥಳವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವವರ ಸೇವೆಯನ್ನು ಗುರುತಿಸಲು ಹಾಗೂ ಧಾರ್ಮಿಕ ಶಾಂತಿ, ಸಹಭಾಗಿತ್ವ ಮತ್ತು ಸಾಮಾಜಿಕ ಸೇವೆಯ ಮಹತ್ವವನ್ನು ಉತ್ತೇಜಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತೂಮಿನಾಡು ಬುಸ್ತಾನುಲ್ ಇಖ್ವಾನ್ ಸಂಘಟನೆಯ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
ಖಬರ್ ಪರಿರಿಪಾಲನ ಸೇವೆಯನ್ನು ನೀಡುತ್ತಿರುವ ಸಲೀಂ, ಹಂಝ, ಖಲೀಲ್, ಹನೀಫ್, ಸಿದ್ದೀಖ್, ಖಾದರ್ ಸೇರಿದಂತೆ 9 ಮಂದಿಯನ್ನು ಸನ್ಮಾನಿಸಲಾಗಿದೆ.
ಈ ಸಂದರ್ಭ ಮಸೀದಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಎ ಆರ್, ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕೋಶಾಧಿಕಾರಿ ಮಹಮೂದ್, ಕಾರ್ಯಕಾರಿ ಸಮಿತಿ ಸದಸ್ಯ ಕುಂಞಮೋನು, ಬುಸ್ತಾನಲ್ ಇಖ್ವಾನ್ ಸಂಘಟನೆಯ ನೇತಾರರಾದ ಅಬ್ದುಲ್ ಲತೀಫ್ (ಬಾಬಾ), ಪುತ್ತು ಬಾವು, ಇಸ್ಮಾಯಿಲ್, ಸಿದ್ದೀಖ್ ತಂಙಳ್ ಸಹಿತ ಧಾರ್ಮಿಕ ಮುಖಂಡರು, ಮತ್ತು ಸ್ಥಳೀಯ ಗಣ್ಯ ವ್ಯಕ್ತಿಗಳು ಈ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮಸೀದಿಗಳ ಖಬರ್ ಸ್ಥಳವನ್ನು ಸ್ವಚ್ಛತೆಯಿಂದ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಿರುವವರು ಧಾರ್ಮಿಕ ಶಾಂತಿಯ ಪ್ರತೀಕವಾಗಿದ್ದಾರೆ ಎಂದು ಧಾರ್ಮಿಕ ಮುಖಂಡರು ಈ ಸಂದರ್ಭದಲ್ಲಿ ವಿವರಿಸಿದರು. ಇವರ ಸೇವೆ ಸಮಾಜದ ಸಮಾನತೆ ಮತ್ತು ಸಹಾನುಭೂತಿಯ ಸಂಕೇತ ಎಂದು ಅವರು ಹೇಳಿದರು.