ಕಾಸರಗೋಡು: ಸಹಕಾರಿ ಇಲಾಖೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಕೇರಳ ರಾಜ್ಯದ ಸಹಕಾರಿ ಸಂಘಗಳಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹಕಾರ ಭಾರತಿಯ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರನ್ ಒತ್ತಾಯಪಡಿಸಿದರು.
ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿದ ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಸಮಿತಿಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪದ್ಮರಾಜ ಪಟ್ಟಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯ ಉಪಾಧ್ಯಕ್ಷ ಅರವಿಂದಾಕ್ಷನ್, ಕಾರ್ಯದರ್ಶಿ ಗಣೇಶ ಪಾರೆಕಟ್ಟೆ, ರಾಜ್ಯಸಮಿತಿ ಸದಸ್ಯ ಐತ್ತಪ್ಪ ಮವ್ವಾರು ಮಾರ್ಗದರ್ಶನವಿತ್ತರು. ಈ ವರ್ಷ ಸಹಕಾರ ಸಪ್ತಾಹವನ್ನು ನವಂಬರ್ 16ರಂದು ಕಾಸರಗೋಡಿನಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್ ಸ್ವಾಗತಿಸಿ, ಸಂಘಟನಾ ಪ್ರಮುಖ್ ಅಶೋಕ್ ಬಾಡೂರು ವಂದಿಸಿದರು. ನೂತನ ಸಮಿತಿಯನ್ನು ರೂಪಿಸಲಾಯಿತು. ಅಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ, ಉಪಾಧ್ಯಕ್ಷರಾಗಿ ಪ್ರೇಮ್‍ಕುಮಾರ್ ಮಂಗಲ್ಪಾಡಿ, ಉಪಾಧ್ಯಕ್ಷರಾಗಿ ಜಯರಾಜ್ ಬೆಳ್ಳೂರು, ಪ್ರಧಾನಕಾರ್ಯದರ್ಶಿಯಾಗಿ ರಾಧಾಕೃಷ್ಣನ್ ಕರಿಂಬಿಲ್, ಸಹಕಾರ್ಯದರ್ಶಿಗಳಾಗಿ ವೇಣುಗೋಪಾಲ್, ಶ್ರೀಲತಾ ಕಳನಾಡು, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ್ ಬಾಡೂರು, ಕೋಶಾಧಿಕಾರಿಯಾಗಿ ಚಂದ್ರಹಾಸ ಮಾಸ್ತರ್ ಆಯ್ಕೆಯಾದರು.