ನವದೆಹಲಿ: ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಫೆಬ್ರವರಿ 15ರಂದು ತಾನು ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶನಿವಾರ ವಜಾಗೊಳಿಸಿದೆ.
ನವದೆಹಲಿ: ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಫೆಬ್ರವರಿ 15ರಂದು ತಾನು ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶನಿವಾರ ವಜಾಗೊಳಿಸಿದೆ.
'ತಾನು ನೀಡಿರುವ ತೀರ್ಪಿನಲ್ಲಿ ಎದ್ದುಕಾಣುವಂತಹ ಯಾವುದೇ ದೋಷ ಇಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿದೆ.
'ಸುಪ್ರೀಂ ಕೋರ್ಟ್ ನಿಯಮಗಳು-2013ರ ಅನುಸಾರ, ತೀರ್ಪನ್ನು ಮರುಪರಿಶೀಲನೆ ಮಾಡುವ ಅಗತ್ಯತೆಯನ್ನು ಪುಷ್ಟೀಕರಿಸುವ ಅಂಶಗಳು ಕಂಡುಬಂದಿಲ್ಲ. ಹೀಗಾಗಿ, ಈ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ' ಎಂದು ಪೀಠ ಹೇಳಿತು.
ಪುನರ್‌ಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ತೆರೆದ ನ್ಯಾಯಾಲಯದಲ್ಲಿ ನಡೆಸಬೇಕು ಎಂಬ ಕೋರಿಕೆಯನ್ನೂ ಪೀಠವು ತಿರಸ್ಕರಿಸಿತು.
ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ವಿಷಯವು ಶಾಸಕಾಂಗ ಮತ್ತು ಕಾರ್ಯಾಂಗದ ನೀತಿಗಳ ವ್ಯಾಪ್ತಿಯೊಳಗೆ ಬರುತ್ತದೆ ಎಂದು ವಕೀಲ ಮ್ಯಾಥ್ಯೂಸ್ ಜೆ. ನೆಡುಂಬಾರ ಹಾಗೂ ಇತರರು ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.