ಅಂದು ಅಕ್ಟೋಬರ್ 7, 2023...ಪ್ಯಾಲೆಸ್ಟೀನ್‌ನ ಬಂಡುಕೋರರ ಗುಂಪಾದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಇಸ್ರೇಲಿನ ಸುಮಾರು 1200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹಾಗೇ 250 ಜನರನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು.
ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವರ್ ಈ ದಾಳಿಯ ರೂವಾರಿಯಾಗಿದ್ದ. ಈ ಘಟನೆ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಯುದ್ಧಕ್ಕೆ ಕಾರಣವಾಯಿತು. ಇದಾಗಿ ಒಂದು ವರ್ಷದ ಬಳಿಕ ಯಹ್ಯಾ ಸಿನ್ವರ್‌ನನ್ನು ಇಸ್ರೇಲ್ ಸೇನೆ ಕೊಂದು ಹಾಕಿತು.
ಇಸ್ರೇಲಿಗೆ ಅಂದಿನಿಂದಲೂ ಸಿನ್ವರ್ ಮುಖ್ಯ ಗುರಿಯಾಗಿದ್ದ. ಗಾಜಾದಲ್ಲಿ ಅಡಗಿಕೊಂಡಿದ್ದವನನ್ನು ಬಂಧಿಸಲು ಅಥವಾ ಹತ್ಯೆ ಮಾಡಲು ಇಸ್ರೇಲ್ ಸೇನೆ ಸಾಕಷ್ಟು ಸಲ ಪ್ರಯತ್ನ ಮಾಡಿತ್ತು. ಆದರೂ ಹತ್ತಾರು ಬಾರಿ ತಪ್ಪಿಸಿಕೊಂಡಿದ್ದ. ಅಂತಿಮವಾಗಿ ಇಸ್ರೇಲ್ ಸೇನೆ ದಕ್ಷಿಣ ಗಾಜಾದ ರಫಾ ನಗರದ ಕಟ್ಟಡವೊಂದರ ಮೇಲೆ ನಡೆಸಿದ ದಾಳಿಯಲ್ಲಿ ಹತ್ಯೆ ಮಾಡಿತು. ಯಹ್ಯಾ ಸಿನ್ವರ್ ಮೃತಪಟ್ಟಿರುವುದನ್ನು ಹಮಾಸ್ ದೃಡಪಡಿಸಿದೆ.
ಯಾರು ಈ ಯಹ್ಯಾ ಸಿನ್ವರ್? ಇವನ ಹಿನ್ನಲೆ ಏನು? ಹಮಾಸ್ ಸಂಘಟನೆಯ ಮುಖ್ಯಸ್ಥನಾಗಿದ್ದು ಹೇಗೆ? ಎಂಬ ಮಾಹಿತಿ ಇಲ್ಲಿದೆ....
ಯಹ್ಯಾ ಸಿನ್ವರ್ ಗಾಜಾದ ಕಾನ್ ಯೂನಿಸ್ ಪಟ್ಟಣದಲ್ಲಿ ಒಂದು ನಿರಾಶ್ರಿತರ ಶಿಬಿರದಲ್ಲಿ 1962ರಲ್ಲಿ ಜನಿಸಿದ. ಸ್ಥಳೀಯವಾಗಿ ನಡೆಯುತ್ತಿದ್ದ ಶೈಕ್ಷಣಿಕ ಶಿಬಿರಗಳಲ್ಲಿ ವಿದ್ಯಾಭ್ಯಾಸ ಪಡೆದು, ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ (ಅರೇಬಿಕ್ ಭಾಷೆ) ಪಡೆದನು.
ಇಸ್ಲಾಮಿಕ್ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದ ಸಿನ್ವರ್, ಎಲ್ಲರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳುತ್ತಿದ್ದ. ಇಸ್ರೇಲ್ ವಿರುದ್ಧ ಗಾಜಾದಲ್ಲಿ ನಡೆಯುತ್ತಿದ್ದ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ. ಇಸ್ರೇಲ್ ದೇಶವನ್ನು ಇಲ್ಲವಾಗಿಸಿ ಅಲ್ಲಿ ಇಸ್ಲಾಮಿಕ್ ದೇಶವನ್ನು ಸ್ಥಾಪಿಸುವ ಗುರಿಯೊಂದಿಗೆ 1987ರಲ್ಲಿ ಗಾಜಾದಲ್ಲಿ ಹಮಾಸ್ ಸಂಘಟನೆ ಸ್ಥಾಪನೆಯಾಯಿತು. ಹಮಾಸ್ ಒಂದು ಕಟ್ಟುನಿಟ್ಟಿನ ಇಸ್ಲಾಮಿಕ್ ಸಿದ್ಧಾಂತದ ಪಾಲಕ ಸಂಘಟನೆಯಾಗಿದೆ.
ಹಮಾಸ್ ಆರಂಭವಾಗಿ ಕೆಲವೇ ತಿಂಗಳಲ್ಲಿ ಸಿನ್ವರ್ ಸಂಘಟನೆ ಸೇರಿದ. ಕೆಲ ಕಾಲದ ಬಳಿಕ ಹಮಾಸ್ ಸಂಘಟನೆಯ ಭದ್ರತಾ ವಿಭಾಗದ ಜವಾಬ್ದಾರಿ ವಹಿಸಿಕೊಂಡು, ಇಸ್ರೇಲ್ ಪರವಾಗಿ ಕಾರ್ಯಾಚರಿಸುವ ಬೇಹುಗಾರರನ್ನು ಹತ್ಯೆ ಮಾಡುವ ಕಾರ್ಯತಂತ್ರ ರೂಪಿಸಿದ. ಇದರ ಪರಿಣಾಮ ಇಸ್ರೇಲ್ ಸೇನೆ ಪರ ಕೆಲಸ ಮಾಡುತ್ತಿದ್ದ ಗಾಜಾದ ನಾಲ್ಕು ಜನರನ್ನು ಹತ್ಯೆ ಮಾಡಿದ. ಹಾಗೇ ಇಬ್ಬರು ಇಸ್ರೇಲ್ ಸೈನಿಕರನ್ನು ಕೊಂದು ಹಾಕಿದ್ದ.
ಈ ಹತ್ಯೆಗಳಿಂದ ಸಿನ್ವರ್ ಸಂಘಟನೆಯಲ್ಲಿ ದೊಡ್ಡ ಹೆಸರು ಮಾಡಿದ. ಈ ಘಟನೆಯಿಂದ ಅವನಿಗೆ 'ದ ಬಚರ್ ಆಫ್ ಕಾನ್ ಯೂನಿಸ್' (ಕಾನ್ ಯೂನಿಸ್ ಕಟುಕ) ಎಂಬ ಹೆಸರನ್ನು ಹಮಾಸ್ ನೀಡಿತು. ಇಸ್ರೇಲ್, ಆತ ನಡೆಸಿದ ಅಪರಾಧಗಳಿಗೆ ಶಿಕ್ಷೆಯಾಗಿ, ನಾಲ್ಕು ಅವಧಿಯ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಯಿತು. 90ರ ದಶಕದಲ್ಲಿ ಜೈಲು ಸೇರಿದ ಸಿನ್ವರ್ ಇತರೆ ಕೈದಿಗಳ ಜೊತೆ ಸೇರಿ ಮೂಲ ಸೌಕರ್ಯಗಳಿಗಾಗಿ ಹೋರಾಟ ನಡೆಸಿದ. ಈ ವೇಳೆ ಕೈದಿಗಳ ನಾಯಕನಾದ.
ಜೈಲಿನಲ್ಲಿದ್ದಾಗ ಸಿನ್ವರ್ ಆತ್ಮಕಥೆ ಮಾದರಿಯ ಒಂದು ಕಾದಂಬರಿ ಬರೆದ. ಅದರಲ್ಲಿ ಪ್ಯಾಲೆಸ್ಟೀನ್ ಮನೆಗಳು ಧ್ವಂಸವಾಗುವುದನ್ನು ಚಿತ್ರಣ ಮಾಡಿದ್ದ. ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಸಿನ್ವರ್ ಜೈಲಿನಲ್ಲಿದ್ದ. 2011ರಲ್ಲಿ ಯುದ್ಧ ಕೈದಿಗಳ ಪರಸ್ಪರ ಹಸ್ತಾಂತರ ಯೋಜನೆ ಅಡಿಯಲ್ಲಿ ಸಿನ್ವರ್ ಬಿಡುಗಡೆಯಾದ. ಈ ಸಂದರ್ಭದಲ್ಲಿ ಹಮಾಸ್‌ನ ಸಾವಿರಕ್ಕೂ ಹೆಚ್ಚು ಕೈದಿಗಳು ಬಿಡುಗಡೆಯಾದರು.
ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಸಿನ್ವರ್ ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಲು ಆರಂಭಿಸಿದ. ಇದೇ ವೇಳೆ ಅರಬ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದ ಯುವತಿಯನ್ನು ಮದುವೆಯಾದ.
2012ರಲ್ಲಿ ಇರಾನ್‌ಗೆ ಭೇಟಿ ನೀಡಿದ್ದ ಸಿನ್ವರ್, ಹಮಾಸ್ ಸಾಮರ್ಥ್ಯ ಹೆಚ್ಚಿಸಲು ನೆರವು ಕೇಳಿದ. ಇರಾನ್ ಆರ್ಥಿಕ ಮತ್ತು ಮಿಲಿಟರಿ ನೆರವು ನೀಡಿತು. ನಂತರದ ದಿನಗಳಲ್ಲಿ ಗಾಜಾದ ಗಡಿಯಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸುವ ಯೋಜನೆಗಳನ್ನು ಸಿದ್ಧಪಡಿಸಿ ಅವು ಕಾರ್ಯಗತವಾಗುವಂತೆ ನೋಡಿಕೊಂಡ.
ಇಸ್ರೇಲ್ ನಮ್ಮ ರಾಜಕೀಯ ವಿರೋಧಿ ಮಾತ್ರವಲ್ಲ, ಮುಸ್ಲಿಂ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ದುಷ್ಟ ಶಕ್ತಿ ಎಂದು ಹೇಳುತ್ತಿದ್ದ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರವೇ, ಇಸ್ರೇಲ್ ನಾಶ ಮಾಡಿ, ಆ ಭೂಪ್ರದೇಶವನ್ನು ಮರಳಿ ಪಡೆಯುವ ದೊಡ್ಡ ಗುರಿಯ ಸಾಧನೆಗಾಗಿ ಈ ತ್ಯಾಗ ಮಾಡುತ್ತಿದ್ದೇವೆ ಎಂದು ಹಲವು ಭಾಷಣಗಳಲ್ಲಿ ಸಿನ್ವರ್ ಹೇಳುತ್ತಿದ್ದ.
2005ರಲ್ಲಿ ಗಾಜಾದಿಂದ ಇಸ್ರೇಲ್ ಹೊರಬಂದ ಬಳಿಕ, ಸಿನ್ವರ್ ಜೈಲಿನಲ್ಲಿ ಇದ್ದುಕೊಂಡು ಗಾಜಾವನ್ನು ಮಿಲಿಟರಿ ನೆಲೆಯಾಗಿ ಪರಿವರ್ತಿಸುವ ಐಡಿಯಾಗಳನ್ನು ಕೊಡುತ್ತಿದ್ದ. ಆ ಪ್ರಕಾರವಾಗಿ ಅಲ್ಲಿ ಕೆಲಸಗಳು ನಡೆಯುತ್ತಿದ್ದವು. ನೆಲದಲ್ಲಿ ಸುರಂಗಗಳ ನಿರ್ಮಾಣ, ಶಸ್ತ್ರಗಳ ಸಂಗ್ರಹಣೆ, ರಾಕೆಟ್, ಸಿಡಿ ಮದ್ದುಗಳ ಉತ್ಪಾದನೆಯಾಗುತ್ತಿತ್ತು ಎಂದು ಇಸ್ರೇಲ್ ಗುಪ್ತಚರರು ಹೇಳಿದ್ದಾರೆ.
ಸಿನ್ವರ್ ಓರ್ವ ಹಠಮಾರಿ ಮತ್ತು ದೃಢ ನಿಶ್ಚಯದ ವ್ಯಕ್ತಿ. ಭಯ ಹುಟ್ಟಿಸುವಂತಹ ಸ್ವಭಾವ, ಇದ್ದಕ್ಕಿದ್ದಂತೆ ಕೋಪ ಮಾಡಿಕೊಳ್ಳುವ ಗುಣದ ಹೊರತಾಗಿಯೂ, ಗಾಜಾದ ಜನರ ದೈನಂದಿನ ಕಷ್ಟಗಳನ್ನು ಸಿನ್ವರ್ ಅರ್ಥ ಮಾಡಿಕೊಂಡಿದ್ದ ಎಂದು ಸ್ಥಳೀಯರು ಶ್ಲಾಘಿಸುತ್ತಾರೆ. ಹಮಾಸ್ ಅಥವಾ ಹಿಜ್ಬುಲ್ಲಾ ಇಸ್ರೇಲ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದಾಗೆಲ್ಲ ಸಿನ್ವರ್ ಸಂಭ್ರಮಿಸುತ್ತಿದ್ದ ಎಂದ ಅವರು ಹೇಳುತ್ತಾರೆ.
ಸಿನ್ವರ್ ಜೈಲಿನಲ್ಲಿ ಇದ್ದಾಗ ಇಸ್ರೇಲ್ ಜೈಲು ಅಧಿಕಾರಿಯಾಗಿದ್ದ ಮೈಕಲ್ ಕೌಬಿ ಎಂಬುವರು ಅವನನ್ನು 180 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಪ್ರಭಾವಶಾಲಿಯಾಗಿದ್ದ ಸಿನ್ವರ್‌ನ ಉಪಸ್ಥಿತಿ ಇತರರಲ್ಲಿ ಭಯ, ಆತಂಕ ಮೂಡಿಸುತ್ತಿತ್ತು. ಆತ್ಮವಿಶ್ವಾಸದಲ್ಲೆ ಇರುತ್ತಿದ್ದ ಸಿನ್ವರ್ ವಿಚಾರಣೆ ಸಂದರ್ಭದಲ್ಲಿ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿದ್ದ. ಜೈಲಿನ ಅಧಿಕಾರಿಗಳೊಡನೆಯೂ ವಾದಿಸುತ್ತಿದ್ದ ಎಂದು ಕೌಬಿ ವಿವರಿಸಿದ್ದಾರೆ.
ನೀನು ಯಾಕೆ ಇನ್ನೂ ಮದುವೆಯಾಗಿಲ್ಲ ಎಂದು ಕೌಬಿ ಒಂದು ಬಾರಿ ಸಿನ್ವರ್‌ನನ್ನು ಪ್ರಶ್ನಿಸಿದ್ದರಂತೆ. 'ಹಮಾಸ್ ಸಂಘಟನೆಯೇ ನನ್ನ ಪತ್ನಿ, ನನ್ನ ಮಗು, ಮತ್ತು ನನ್ನ ಸರ್ವಸ್ವ' ಎಂದು ಸಿನ್ವರ್ ಉತ್ತರಿಸಿದ್ದ ಎಂದು ಅವರು ನೆನಪಿಸಿಕೊಂಡಿದ್ದರು. ಆದರೆ ಜೈಲಿನಿಂದ ಬಿಡುಗಡೆಯಾದ ಬಳಿಕ ಮದುವೆಯಾಗಿ ಸಿನ್ವರ್ ಮೂರು ಮಕ್ಕಳನ್ನು ಪಡೆದ.