ತಿರುವನಂತಪುರಂ: ಮಲಯಾಳಿ ಮಾಡೆಲ್ ಆರಾಧ್ಯ ದೇವಿ ( Aradhya Devi ) ಅಲಿಯಾಸ್ ಶ್ರೀಲಕ್ಷ್ಮಿ ಸತೀಶ್ ಅವರು ಲೆಜೆಂಡರಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ( Ram Gopal Varma ) ಅವರ ಸಿನಿಮಾದೊಂದಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ತನ್ನ ಇನ್ಸ್ಟಾಗ್ರಾಂ ರೀಲ್‌ಗಳ ಮೂಲಕವೇ ಗಮನಸೆಳೆದ ಆರಾಧ್ಯ, ಆರಂಭದಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡುವುದಿಲ್ಲ ಎಂದಿದ್ದರು. ಆದರೆ, ಇದೀಗ ತಮ್ಮ ಮಾತನ್ನು ವಾಪಸ್ ತೆಗೆದುಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಗ್ಲಾಮರಸ್ ಪಾತ್ರಗಳ ಕುರಿತ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನನ್ನ ದೃಷ್ಟಿಕೋನ ಬದಲಾಗಿದ್ದು, ಗ್ಲಾಮರಸ್ ಅಥವಾ ಗ್ಲಾಮರಸ್ ಇಲ್ಲದ ಯಾವುದೇ ಪಾತ್ರವನ್ನು ನಾನು ಮಾಡುತ್ತೇನೆ ಎಂದು ನಟಿ ಆರಾಧ್ಯ ಹೇಳಿದ್ದಾರೆ.
ಗ್ಲಾಮರ್ ಪಾತ್ರಗಳನ್ನು ಮಾಡುವುದಿಲ್ಲ ಎಂದು ನಾನು ಈ ಹಿಂದೆ ಹೇಳಿದ್ದೆ. ಇಪ್ಪತ್ತೆರಡನೇ ವಯಸ್ಸಿನಲ್ಲಿ ನಾನು ತೆಗೆದುಕೊಂಡ ನಿರ್ಧಾರವನ್ನು ನಾನಿಂದು ಜಡ್ಜ್ ಮಾಡಲು ಹೋಗುವುದಿಲ್ಲ. ಜೀವನದ ಅನುಭವಗಳು ಮತ್ತು ಸಮಯಗಳು ಬದಲಾಗುತ್ತಿದ್ದಂತೆ ನಮ್ಮ ದೃಷ್ಟಿಕೋನಗಳು ಕೂಡ ಬದಲಾಗುತ್ತವೆ. ಜನರು ಮತ್ತು ನನ್ನ ಪಾತ್ರಗಳ ಬಗ್ಗೆ ನನ್ನ ಗ್ರಹಿಕೆಗಳು ಬದಲಾಗುತ್ತವೆ. ಆ ದಿನ ನಾನು ನೀಡಿದ ಹೇಳಿಕೆಗೆ ನಾನು ಪಶ್ಚಾತ್ತಾಪ ಪಡುವುದಿಲ್ಲ. ನಾನು ಯಾವುದೇ ಗ್ಲಾಮರಸ್ ಪಾತ್ರಕ್ಕೂ ಸಿದ್ಧಳಿದ್ದೇನೆ ಮತ್ತು ಉತ್ತಮ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ ಎಂದು ಆರಾಧ್ಯ ಹೇಳಿದ್ದಾರೆ.
ಅಂದಹಾಗೆ ಕೇರಳ ಮೂಲದ ಶ್ರೀಲಕ್ಷ್ಮೀ ಸತೀಶ್, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಒಂದೇ ಒಂದು ವಿಡಿಯೋ ಮೂಲಕ ಲಕ್ಷಾಂತರ ನೆಟ್ಟಿಗರ ಮನ ಸೆಳೆದ ರೂಪದರ್ಶಿ. ಈಕೆ ಸೀರೆಯುಟ್ಟ ವಿಡಿಯೋ ನೆಟ್ಟಿಗರನ್ನು ಮಾತ್ರವಲ್ಲ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಗಮನವನ್ನೂ ಸೆಳೆದಿದೆ. ತನ್ನ ವೈರಲ್ ವಿಡಿಯೋದಿಂದಾಗಿ ಶ್ರೀಲಕ್ಷ್ಮಿಗೆ ನಾಯಕಿಯಾಗಿ ನಟಿಸುವ ಅವಕಾಶವು ಒದಗಿ ಬಂದಿತು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸ್ಯಾರಿ ಸಿನಿಮಾದಲ್ಲಿ ಶ್ರೀಲಕ್ಷ್ಮೀಗೆ ಅವಕಾಶ ಸಿಕ್ಕಿದೆ. ಈ ಕಾರಣದಿಂದ ಆಕೆ ತನ್ನ ಹೆಸರನ್ನು ಶ್ರೀ ಲಕ್ಷ್ಮಿಯಿಂದ ಆರಾಧ್ಯ ದೇವಿ ಎಂದು ಬದಲಾಯಿಸಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.