ಜೆರುಸಲೇಂ: ಇಸ್ರೇಲ್‌ನ ಕರಾವಳಿ ತೀರದ ಕೆಸರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಶನಿವಾರ ಡ್ರೋನ್ ದಾಳಿ ನಡೆದಿದೆ.
'ಪ್ರಧಾನಿ ಮನೆಯ ಮೇಲೆ ಡ್ರೋನ್ ದಾಳಿ ನಡೆದಿದೆ. ಆದರೆ, ನಿವಾಸದಲ್ಲಿ ಪ್ರಧಾನಿ ಅಥವಾ ಅವರ ಪತ್ನಿ ಇರಲಿಲ್ಲ.
ದಾಳಿಗಳ ಬಗ್ಗೆ ಇಸ್ರೇಲ್ ಸೇನೆ ಬೆಳಿಗ್ಗೆ ಹೊತ್ತಿಗೆ ಮಾಹಿತಿ ನೀಡಿದೆ. 'ಲೆಬನಾನ್‌ನಿಂದ ಒಟ್ಟು ಮೂರು ಡ್ರೋನ್‌ಗಳು ಬಂದಿದ್ದವು. ಅವುಗಳಲ್ಲಿ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ. ಒಂದು ಡ್ರೋನ್, ಕಟ್ಟಡವೊಂದಕ್ಕೆ ಅಪ್ಪಳಿಸಿದೆ' ಎಂದು ಸೇನೆ ಹೇಳಿದೆ. ಆದರೆ, ಆ ಕಟ್ಟಡ ಪ್ರಧಾನಿ ನೆತನ್ಯಾಹು ಅವರ ನಿವಾಸವೇ ಎಂಬುದನ್ನು ಮಾತ್ರ ಸೇನೆ ಖಚಿತಪಡಿಸಿಲ್ಲ. ಈ ದಾಳಿಯ ಹೊಣೆಯನ್ನು ಹಿಜ್ಬುಲ್ಲಾ ಕೂಡ ಹೊತ್ತುಕೊಂಡಿಲ್ಲ. ಜೊತೆಗೆ, ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿಲ್ಲ.
'ಇಸ್ರೇಲ್‌ನ ಉತ್ತರ ಭಾಗದ ಪ್ರಮುಖ ನಗರ ಹೈಫಾದಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿ ಅತ್ಯಾಧುನಿಕ ಸರಣಿ ರಾಕೆಟ್‌ಗಳನ್ನು ಹಾರಿಸಲಾಗಿದೆ' ಎಂದು ಹಿಜ್ಬುಲ್ಲಾ ಸಂಘಟನೆ ಶನಿವಾರ ಹೇಳಿದೆ. 'ಇಸ್ರೇಲ್ ಗುರಿಯಾಗಿಸಿ ಲೆಬನಾನ್‌ನಿಂದ ಸುಮಾರು 55 ರಾಕೆಟ್‌ಗಳು ಅಪ್ಪಳಿಸಿವೆ' ಎಂದು ಇಸ್ರೇಲ್ ಸೇನೆ ಕೂಡ ಒಪ್ಪಿಕೊಂಡಿದೆ.
'ಕರಾವಳಿ ತೀರದ ನಗರವೊಂದರಲ್ಲಿ ರಾಕೆಟ್ ಸ್ಫೋಟದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹೈಫಾ ಜಿಲ್ಲೆಯ ಪ್ರದೇಶವೊಂದರಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ, ಮೂರು ಅಂತಸ್ತಿನ ಕಟ್ಟಡವೊಂದರ ಮೇಲೂ ರಾಕೆಟ್ ಬಿದ್ದಿದೆ' ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್‌ನೊಂದಿಗಿನ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹಿಜ್ಬುಲ್ಲಾ ಶುಕ್ರವಾರವಷ್ಟೇ ಹೇಳಿಕೆ ನೀಡಿತ್ತು.
'ನನ್ನನ್ನು ತಡೆಯಲು ಸಾಧ್ಯವಿಲ್ಲ'
ತಮ್ಮ ಮನೆಯ ಮೇಲೆ ಡ್ರೋನ್ ದಾಳಿ ನಡೆದ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನೆತನ್ಯಾಹು 'ಯಾವುದೇ ಶಕ್ತಿಗೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ನಮ್ಮ ದೇಶ ಗೆಲುವು ಸಾಧಿಸಲಿದೆ' ಎಂದಿದ್ದಾರೆ. ಈ ಬಗ್ಗೆ ಅವರು ಹಿಬ್ರು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ವಿಡಿಯೊ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು 'ಅಲ್‌ಜಜೀರಾ' ವರದಿ ಮಾಡಿದೆ. 'ನಮ್ಮ ಜನರ ತಲೆಗಳನ್ನು ತೆಗೆದ ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ನಮ್ಮ ಶಿಶುಗಳನ್ನು ಜೀವಂತ ಸಮಾಧಿ ಮಾಡಿದ ಕೃತ್ಯದ ಸೂತ್ರದಾರ ಬಂಡುಕೋರ ಹಮಾಸ್ ನಾಯಕ ಸಿನ್ವರ್ ಅವರನ್ನು ನಾವು ಹತ್ಯೆ ಮಾಡಿದ್ದೇವೆ. ಇರಾನ್ ಬೆಂಬಲಿತ ಬಂಡುಕೋರರ ವಿರುದ್ಧದ ಯುದ್ಧ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
ಗಾಜಾಪಟ್ಟಿ: 50 ಸಾವು
ಹಮಾಸ್ ಸಂಘಟನೆಯ ನಾಯಕ ಸಿನ್ವರ್ ಹತ್ಯೆ ಬಳಿಕ ಯುದ್ಧವನ್ನು ನಿಲ್ಲಸಬಹುದು ಎಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಒತ್ತಾಯಿಸುತ್ತಿದ್ದರೂ ಇಸ್ರೇಲ್ ತನ್ನ ದಾಳಿಯನ್ನು ಗಾಜಾಪಟ್ಟಿ ಹಾಗೂ ಲೆಬನಾನ್ ಮೇಲೆ ಶನಿವಾರ ತೀವ್ರಗೊಳಿಸಿದೆ. ಗಾಜಾಪಟ್ಟಿ ಮೇಲಿನ ದಾಳಿಯಲ್ಲಿ ಮಕ್ಕಳೂ ಸೇರಿದಂತೆ ಸುಮಾರು 50 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಗಳ ಮೇಲೆ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಲೆಬನಾನ್‌ನ ಬೆಕಾ ಕಣಿವೆಯ ಮೇಲೆ ಇಸ್ರೇಲ್ ಶನಿವಾರ ದಾಳಿ ನಡೆಸಿದೆ. ಇಲ್ಲಿನ ಬಾಲೂಲ್ ನಗರದ ವಸತಿ ಕಟ್ಟಡದ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ಬಾಲೂಲ್ ನಗರದ ಪಕ್ಕದ ಸೊಹ್ಮರ್ ನಗರದ ಮೇಯರ್ ಕೂಡ ಸೇರಿದ್ದಾರೆ.