ಟೊರಾಂಟೊ: ಕೆನಡಾದಲ್ಲಿರುವ ಭಾರತದ ಇನ್ನುಳಿದ ರಾಜತಾಂತ್ರಿಕ ಅಧಿಕಾರಿಗಳಿಗೆ 'ವಿಯೆನ್ನಾ ಒಪ್ಪಂದ ಉಲ್ಲಂಘಿಸಿದರೆ ದೇಶ ತೊರೆಯಬೇಕಾಗುತ್ತದೆ' ಎನ್ನುವ ಎಚ್ಚರಿಕೆ ನೀಡಲಾಗಿದೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಶುಕ್ರವಾರ ಹೇಳಿದ್ದಾರೆ.
ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಾ ಪ್ರಜೆಗಳ ಜೀವ ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಎಂದೂ ಜೋಲಿ ಮಾಂಟ್ರಿಯಲ್‌ನಲ್ಲಿ ಎಚ್ಚರಿಸಿದ್ದಾರೆ.
ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಹೈಕಮಿಷನರ್ ಭಾಗಿಯಾಗಿದ್ದಾರೆ ಎಂದು ಕೆನಡಾ ಆರೋಪಿಸಿ, ಆರು ಮಂದಿ ರಾಜತಾಂತ್ರಿಕರನ್ನು ದೇಶ ತೊರೆಯುವಂತೆ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವೂ ಕೆನಡಾದ ಆರು ರಾಜತಾಂತ್ರಿಕರಿಗೆ ದೇಶ ತೊರೆಯಲು ತಾಕೀತು ಮಾಡಿತ್ತು.
ಭಾರತವನ್ನು ರಷ್ಯಾಕ್ಕೆ ಹೋಲಿಸಿರುವ ಜೋಲಿ, 'ಕೆನಡಾದಲ್ಲಿ ನಡೆದಿರುವ ಹತ್ಯೆಗಳು, ಕೊಲೆ ಬೆದರಿಕೆಗಳು ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾರತದ ರಾಜತಾಂತ್ರಿಕರ ನಂಟು ಇರುವುದಾಗಿ ಕೆನಡಾದ ಪೊಲೀಸ್ ಪಡೆ ಹೇಳಿದೆ' ಎಂದು ತಿಳಿಸಿದ್ದಾರೆ.
'ನಮ್ಮ ದೇಶದ ಇತಿಹಾಸದಲ್ಲಿ ಇಂತಹದ್ದನ್ನು ಕಂಡಿರಲಿಲ್ಲ. ಕೆನಡಾದ ನೆಲದಲ್ಲಿ ಇನ್ನೊಂದು ದೇಶ ಇಂತಹ ಕೃತ್ಯ ಎಸಗಿದ ಉದಾಹರಣೆ ಇಲ್ಲ. ನಾವು ಯುರೋಪಿನ ಬೇರೆಡೆ ಇಂತಹದನ್ನು ನೋಡಿದ್ದೇವೆ. ಜರ್ಮನಿ ಮತ್ತು ಬ್ರಿಟನ್‌ನಲ್ಲಿ ರಷ್ಯಾ ಅಂತಹ ಕೃತ್ಯಗಳನ್ನು ಮಾಡಿದೆ. ಈ ವಿಷಯದಲ್ಲಿ ನಾವು ದೃಢವಾಗಿ ನಿಲ್ಲುವ ಅಗತ್ಯವಿದೆ' ಎಂದು ಹೇಳಿದ್ದಾರೆ.
ಭಾರತದ ಉಳಿದ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಹಾಕಲಾಗುವುದೇ ಎಂಬ ಪ್ರಶ್ನೆಗೆ ಅವರು, 'ಈಗಾಗಲೇ ಹೈಕಮಿಷನರ್ ಸೇರಿ ಆರು ಮಂದಿಯನ್ನು ಹೊರ ಹಾಕಲಾಗಿದೆ. ಮುಖ್ಯವಾಗಿ ಟೊರಾಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ರಾಜತಾಂತ್ರಿಕರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಲಾಗಿದೆ. ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿಸುವ ಯಾವುದೇ ರಾಜತಾಂತ್ರಿಕರನ್ನು ನಾವು ಸಹಿಸಿಕೊಳ್ಳುವುದಿಲ್ಲ' ಎಂದು ತಿಳಿಸಿದರು.
'ಗಮನ ಬೇರೆಡೆ ಸೆಳೆಯಲು ಯತ್ನ' ಒಟ್ಟಾವ
ಇತರ ವಿವಾದಗಳಿಂದ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಬಳಸಿಕೊಂಡಿದ್ದಾರೆ ಎಂದು ಕೆನಡಾದ ವಿರೋಧ ಪಕ್ಷದ ನಾಯಕರೊಬ್ಬರು ಆರೋಪಿಸಿದ್ದಾರೆ. 'ಖಾಲಿಸ್ತಾನಿ ಉಗ್ರನಿಗೆ ನೀಡಿರುವ ಪೌರತ್ವವನ್ನು ಮರಣೋತ್ತರವಾಗಿ ಹಿಂಪಡೆದು ಈ ಹಿಂದಿನ ಸರ್ಕಾರದ ತಪ್ಪನ್ನು ಸರಿಪಡಿಸಬೇಕು' ಎಂದೂ ಕೆನಡಾ ಪೀಪಲ್ಸ್ ಪಾರ್ಟಿಯ ನಾಯಕ ಮ್ಯಾಕ್ಸಿಮ್ ಬರ್ನಿಯರ್ ಒತ್ತಾಯಿಸಿದ್ದಾರೆ. 'ಇಡೀ ವಿವಾದದ ಕೇಂದ್ರ ವ್ಯಕ್ತಿಯಾಗಿರುವ ನಿಜ್ಜರ್ ಒಬ್ಬ ವಿದೇಶಿ ಭಯೋತ್ಪಾದಕ. ಕೆನಡಾದಲ್ಲಿ ಆಶ್ರಯ ಪಡೆಯಲು ಹಲವು ಬಾರಿ ನಕಲಿ ದಾಖಲೆಗಳನ್ನು ಬಳಸಿದ್ದಾನೆ. ಆತನಿಗೆ 2007ರಲ್ಲಿ ಪೌರತ್ವ ನೀಡಲಾಗಿದೆ' ಎಂದು ಬರ್ನಿಯರ್ ಆರೋಪಿಸಿದರು. ಭಾರತೀಯ ರಾಜತಾಂತ್ರಿಕರು ನಮ್ಮ ನೆಲದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ಮತ್ತು ಸರ್ಕಾರ ಮಾಡಿರುವ ಆರೋಪಗಳು ನಿಜವಾಗಿದ್ದರೆ ಅದು ತುಂಬಾ ಗಂಭೀರ ವಿಚಾರ. ಆದರೆ ಈ ಆರೋಪಗಳಿಗೆ ಸಂಬಂಧಿಸಿ ಇಲ್ಲಿಯವರೆಗೆ ನಾವು ಭಾರತಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಟ್ರುಡೊ ಈ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.