ತಿರುವನಂತಪುರಂ: ಪ್ರಿಂಟಿಂಗ್ ಕಂಪನಿಗೆ ಸಂಬಂಧಿಸಿದ ವೆಚ್ಚ ಅಧಿಕಗೊಳ್ಳುತ್ತಿರುವ ಮಧ್ಯೆ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಪರವಾನಗಿ ಹಾಗೂ ಆರ್ ಸಿ ಪುಸ್ತಕವನ್ನು ಡಿಜಿಟಲೀಕರಣಗೊಳಿಸಿದೆ. ಕಾರ್ಡ್‍ಗಳು ಬೇಕೇ ಬೇಕೆಂದು ಕೋರಿದವರಿಗೆ ಮಾತ್ರ ಮುದ್ರಿತ ಆರ್.ಸಿ. ಬುಕ್ ನೀಡಲಾಗುತ್ತದೆ.
ಕಾರ್ಡ್ ಬೇಕಾದವರು 200 ರೂಪಾಯಿ ಪಾವತಿಸಬೇಕು. ಇತರರು ಡಿಜಿಟಲ್ ನಕಲನ್ನು ಬಳಸಬಹುದು. ಆರ್‍ಸಿ ಮತ್ತು ಪರವಾನಗಿ ಡಿಜಿಟಲ್ ಪ್ರಿಂಟ್ ಕೇಂದ್ರ ಸರ್ಕಾರದ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಾದ ಎಂ ಪರಿವಾಹನ್ ಮತ್ತು ಡಿಜಿ ಲಾಕರ್‍ನಲ್ಲಿ ಲಭ್ಯವಿರುತ್ತದೆ. ಮೊದಲ ಹಂತದಲ್ಲಿ ಚಾಲನಾ ಪರವಾನಿಗೆ ಹಾಗೂ ಎರಡನೇ ಹಂತದಲ್ಲಿ ಆರ್‍ಸಿ ಪುಸ್ತಕದ ಮುದ್ರಣ ಸ್ಥಗಿತಗೊಳ್ಳಲಿದೆ. ಆರು ವರ್ಷಗಳ ಹಿಂದೆ ಕೇಂದ್ರವು ಪರಿವಾಹನ್ ಮೂಲಕ ಡಿಜಿಟಲ್ ಪ್ರತಿಯನ್ನು ಕಾನೂನುಬದ್ಧಗೊಳಿಸಿತ್ತು. ಆದರೆ ಕೋಟಿಗಟ್ಟಲೆ ಭ್ರಷ್ಟಾಚಾರ ಮುಂದುವರಿಸಲು ರಾಜ್ಯದಲ್ಲಿ ಮುದ್ರಣ ಮುಂದುವರಿದಿತ್ತು.
5 ಲಕ್ಷ ಆರ್‍ಸಿ ಮತ್ತು 1.30 ಲಕ್ಷ ಚಾಲನಾ ಪರವಾನಗಿ ಕೇರಳದಲ್ಲಿದೆ. ಕಾರ್ಡ್‍ನ ಮೊತ್ತವನ್ನು ಅರ್ಜಿದಾರರಿಂದ ಸಂಗ್ರಹಿಸಲಾಗುತ್ತದೆ. ಆದರೆ ಹಣ ಪಾವತಿಸದ ಕಾರಣ ಕಂಪನಿ ಮುದ್ರಣ ನಿಲ್ಲಿಸಿದೆ. 10 ಕೋಟಿ ಬಾಕಿ ಪಾವತಿಗೆ ಆಗ್ರಹಿಸಿ ಪತ್ರ ನೀಡಿದ ಬಳಿಕ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಪರಿಹಾರದ ಹಾದಿ ಹಿಡಿದರು. ನೋಟಿಸ್ ನೀಡಿದ್ದರೂ ಕಂಪನಿ ಬಾಕಿ ಪಾವತಿಸದೆ ಪ್ರಿಂಟ್ ಮಾಡುವುದಿಲ್ಲ ಎಂಬ ನಿಲುವು ತಳೆದಿದೆ. ಇದರೊಂದಿಗೆ ಡಿಜಿಟಲ್ ಆವೃತ್ತಿಗೆ ಅನುಮತಿ ನೀಡಲಾಯಿತು.