HEALTH TIPS

ಶಸ್ತ್ರಪೂಜೆ | ದೇಶ ಅಸ್ಥಿರಗೊಳಿಸುವ ಪ್ರಯತ್ನ: ಮೋಹನ್ ಭಾಗವತ್ ಎಚ್ಚರಿಕೆ

Top Post Ad

Click to join Samarasasudhi Official Whatsapp Group

Qries

          ನಾಗ್ಪುರ: ಈಚಿನ ವರ್ಷಗಳಲ್ಲಿ ಭಾರತ ಹೆಚ್ಚು ಬಲಿಷ್ಠವಾಗಿದೆ, ಹೆಚ್ಚಿನ ವಿಶ್ವಾಸಾರ್ಹತೆಯೊಂದಿಗೆ ಜಗತ್ತಿನಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.

           ದುಷ್ಟ ಪಿತೂರಿಗಳು ದೇಶದ ದೃಢ ನಿಶ್ಚಯವನ್ನು ಪರೀಕ್ಷೆಗೆ ಒಡ್ಡುತ್ತಿವೆ.

ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಎಲ್ಲ ದಿಕ್ಕುಗಳಿಂದಲೂ ವೇಗ ಪಡೆದುಕೊಳ್ಳುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ. ಭಾರತವು ಒಂದು ಬೆದರಿಕೆ, ರಕ್ಷಣೆಗಾಗಿ ಪಾಕಿಸ್ತಾನದ ಜೊತೆ ಕೈಜೋಡಿಸಬೇಕು ಎಂಬ ಸಂಕಥನವನ್ನು ಬಾಂಗ್ಲಾದೇಶದಲ್ಲಿ ಸೃಷ್ಟಿಸಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

             ವ್ಯಕ್ತಿಗಳ ಮಟ್ಟದಲ್ಲಿ ಹಾಗೂ ರಾಷ್ಟದ ಮಟ್ಟದಲ್ಲಿ ಗಟ್ಟಿಯಾದ ಚಾರಿತ್ರ್ಯವು, ಪರಿಸ್ಥಿತಿಯು ಪೂರಕವಾಗಿದ್ದರೂ ಪೂರಕವಾಗಿ ಇಲ್ಲದಿದ್ದರೂ ಸತ್ಯದ ವಿಜಯಕ್ಕೆ ಬೇಕಿರುವ ಶಕ್ತಿಯ ನೆಲೆಗಟ್ಟಾಗಿ ಒದಗಿಬರುತ್ತದೆ ಎಂದು ಸಂಘದ ವಾರ್ಷಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾಗವತ್ ಅವರು ಹೇಳಿದ್ದಾರೆ.

           'ವ್ಯಕ್ತಿಗಳ ರಾಷ್ಟ್ರೀಯ ಚಾರಿತ್ರ್ಯದಿಂದಾಗಿ ದೇಶವು ಮಹಾನ್ ಆಗುತ್ತದೆ. ಈ ವರ್ಷ ಆರ್‌ಎಸ್‌ಎಸ್‌ ತನ್ನ ಶತಮಾನೋತ್ಸವಕ್ಕೆ ಕಾಲಿಡುತ್ತಿದೆ, ಹೀಗಾಗಿ ಇದು ಮುಖ್ಯವಾದ ವರ್ಷವಾಗಿದೆ' ಎಂದು ಅವರು ಹೇಳಿದ್ದಾರೆ.

              'ದೇಶದ ಅಭಿವೃದ್ಧಿ, ಧರ್ಮ, ಸಂಸ್ಕೃತಿ ಮತ್ತು ಸಮಾಜಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಅಹಲ್ಯಾಬಾಯಿ ಹೋಳ್ಕರ್, ದಯಾನಂದ ಸರಸ್ವತಿ, ಬಿರ್ಸಾ ಮುಂಡಾ ಅವರಂತಹ ವ್ಯಕ್ತಿಗಳಿಂದ ನಾವು ಸ್ಫೂರ್ತಿ ಪಡೆಯಬೇಕು' ಎಂದೂ ಅವರು ಹೇಳಿದ್ದಾರೆ.

           ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯು ಶಾಂತಿಯುತವಾಗಿ ಇತ್ತು ಎಂದು ತೃಪ್ತಿ ವ್ಯಕ್ತಪಡಿಸಿದ್ದಾರೆ.

              ಬಾಂಗ್ಲಾದೇಶದಲ್ಲಿ ದಬ್ಬಾಳಿಕೆಯ ಮೂಲಭೂತವಾದಿ ವ್ಯವಸ್ಥೆಯೊಂದು ಇದೆ. ಅಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಅಪಾಯದ ಕತ್ತಿಯೊಂದು ತೂಗುತ್ತಿದೆ. ಹಿಂದೂಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅವರಿಗೆ ಮಾನವೀಯತೆ ಹಾಗೂ ಸೌಹಾರ್ದದ ಪರ ಇರುವ ಎಲ್ಲರಿಂದ ನೆರವು ಬೇಕಿದೆ. ಅದರಲ್ಲೂ ಮುಖ್ಯವಾಗಿ, ಭಾರತ ಸರ್ಕಾರ ಮತ್ತು ವಿಶ್ವದಾದ್ಯಂತ ಇರುವ ಹಿಂದೂಗಳ ನೆರವು ಬೇಕಿದೆ ಎಂದು ಭಾಗವತ್ ಹೇಳಿದ್ದಾರೆ.

ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಸ್ವಾರ್ಥ ಹಾಗೂ ಸಣ್ಣಬುದ್ಧಿಯು ಸೌಹಾರ್ದ, ರಾಷ್ಟ್ರೀಯ ಏಕತೆಗಿಂತ ಹೆಚ್ಚು ಪ್ರಾಮುಖ್ಯ ಪಡೆದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆಯು ಬಹಳ ನಾಚಿಕೆಗೇಡಿನದು ಎಂದು ಹೇಳಿದ ಭಾಗವತ್, ಅಪರಾಧ ಎಸಗಿದವರನ್ನು ರಕ್ಷಿಸಲು ಅಲ್ಲಿ ಯತ್ನ ನಡೆದಿತ್ತು ಎಂದಿದ್ದಾರೆ.

ಸರ್ಕಾರ ಕಿತ್ತೊಗೆಯುವವರು: ಭಾಗವತ್ ಆಕ್ರೋಶ

          ಕೆಲವು ಶಕ್ತಿಗಳು ಪ್ರಜಾತಂತ್ರ ವ್ಯವಸ್ಥೆಗೆ ಹಾಗೂ ವಿಶ್ವಶಾಂತಿಗೆ ತಮ್ಮ ಬದ್ಧತೆ ಇದೆ ಎಂದು ಹೇಳಿಕೊಳ್ಳುತ್ತವೆಯಾದರೂ ಬೇರೆ ದೇಶಗಳಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಅಕ್ರಮ ಅಥವಾ ಹಿಂಸಾತ್ಮಕ ಮಾರ್ಗ ಬಳಸಿ ಕಿತ್ತೊಗೆಯಲು ಹೇಸುವುದಿಲ್ಲ ಎಂದು ಭಾಗವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ದುಷ್ಟ ಪ್ರಯತ್ನಗಳು ಭಾರತದ ಸುತ್ತ ನಡೆಯಬಹುದು. ಅದರಲ್ಲೂ ಮುಖ್ಯವಾಗಿ ಗಡಿ ಪ್ರದೇಶಗಳಲ್ಲಿ ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ಇಂಥವು ನಡೆಯಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಡೀಪ್ ಸ್ಟೇಟ್ ವೋಕಿಸ್ಮ್ ಮತ್ತು ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಎಲ್ಲ ಸಾಂಸ್ಕೃತಿಕ ಪರಂಪರೆಗಳ ಘೋಷಿತ ಶತ್ರುಗಳು ಎಂದಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭಗಳಲ್ಲಿ ಅಪ್ರಚೋದಿತವಾಗಿ ಕಲ್ಲು ತೂರಾಟ ನಡೆದ ಘಟನೆಗಳ ಬಗ್ಗೆ ಉಲ್ಲೇಖಿಸಿದ ಭಾಗವತ್ ಸಮಾಜದ ಒಂದು ವರ್ಗದ ಮೇಲೆ ದಾಳಿ ನಡೆಸುವುದನ್ನು ಕಾರಣವೇ ಇಲ್ಲದೆ ಹಿಂಸಾಚಾರಕ್ಕೆ ಇಳಿಯುವುದನ್ನು ಭೀತಿಯನ್ನು ಸೃಷ್ಟಿಸಲು ಯತ್ನಿಸುವುದನ್ನು ಖಂಡಿಸಿದ್ದಾರೆ.

ಪಥಸಂಚಲನ: ಪರಿಸ್ಥಿತಿ ಉದ್ವಿಗ್ನ

        ಮುಂಬೈ: ಮಹಾರಾಷ್ಟ್ರದ ರತ್ನಗಿರಿ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪಥ ಸಂಚಲನ ನಡೆಯುತ್ತಿದ್ದ ವೇಳೆ ಅಲ್ಪಸಂಖ್ಯಾತರು ಘೋಷಣೆ ಕೂಗಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

          'ಕೊಂಕಣ್‌ ನಗರ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಈ ಸಂಬಂಧ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಶಾಂತಿಗೆ ಕಾರಣವಾದ ಐವರನ್ನು ಗುರುತಿಸಲಾಗಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

           'ಪಥಸಂಚಲನದ ವೇಳೆ ವಿರುದ್ಧವಾದ ಘೋಷಣೆಗಳನ್ನು ಕೂಗುವ ಮೂಲಕ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಸಂಘಟನೆಯವರು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.

         'ಯಾವುದೇ ರೀತಿಯ ಹಿಂಸಾಚಾರ ನಡೆದಿಲ್ಲ, ಆದರೆ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧದ ಪ್ರಾಥಮಿಕ ವರದಿಯನ್ನು ನೀಡಬೇಕು ಎಂದು ಆಗ್ರಹಿಸಿ ಹಲವರು ಪೊಲೀಸ್‌ ಠಾಣೆಯ ಮುಂದೆ ಧರಣಿ ನಡೆಸಿದ್ದಾರೆ' ಎಂದು ತಿಳಿಸಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries