ಮುನವ್ವರ್ ಅವರು ಕೆಲವು ದಿನಗಳ ಹಿಂದೆ ಈ ಹೋಟೆಲ್‌ನಲ್ಲಿ ಒಂದು ತಿಂಗಳ ಅವಧಿಯ ಇಂಗ್ಲಿಷ್ ಸಂಭಾಷಣೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಸಿದ್ದರು. ದೇಶದ ವಿವಿಧ ಕಡೆಗಳಿಂದ ಬಂದಿದ್ದ 151 ಮಂದಿ ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಸಲ್ಮಾನ್ ಸಲೀಂ ಠಾಕೂರ್ ಎನ್ನುವ ವ್ಯಕ್ತಿಯು ಸಿಕಂದರಾಬಾದ್‌ನ ಮುತ್ಯಾಲಮ್ಮ ದೇವಸ್ಥಾನದ ವಿಗ್ರಹವನ್ನು ಸೋಮವಾರ ಭಗ್ನಗೊಳಿಸಿದ್ದ.
ವ್ಯಕ್ತಿತ್ವ ವಿಕಸನ ಕಾರ್ಯಾಗಾರದ ಹೆಸರಿನಲ್ಲಿ ಮುನವ್ವರ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ಸಲ್ಮಾನ್ ವಿಗ್ರಹ ಭಗ್ನಗೊಳಿಸಿದ್ದ ಎಂದು ತಿಳಿಸಿದ್ದಾರೆ. ಕಾರ್ಯಾಗಾರದ ದೃಶ್ಯಾವಳಿಗಳನ್ನು, ಅಲ್ಲಿ ಭಾಗಿಯಾಗಿದ್ದವರಿಗೆ ನೀಡಿದ್ದ ವಿವಿಧ ಮಾಹಿತಿಯನ್ನು ಹಾಗೂ ಇತರ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮುತ್ಯಾಲಮ್ಮ ದೇವಸ್ಥಾನದ ಗರ್ಭಗೃಹ ಪ್ರವೇಶಿಸಿದ್ದ ಸಲ್ಮಾನ್, ಅಲ್ಲಿನ ಪ್ರಧಾನ ವಿಗ್ರಹವನ್ನು ಭಗ್ನಗೊಳಿಸಿದ್ದ. ಇದನ್ನು ಖಂಡಿಸಿ ಸ್ಥಳೀಯರು, ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಹೋಟೆಲ್ ಮಾಲೀಕ ಅಬ್ದುಲ್ ರಶೀದ್ ಬಶೀರ್ ಅಹಮದ್ ಮತ್ತು ನಿರ್ವಾಹಕ ಎಸ್.ಎ. ರೆಹ್ಮಾನ್ ಅವರ ವಿರುದ್ಧ ಪ್ರಕರಣ ದಾಖಲಲಾಗಿದೆ.
ಮುನವ್ವರ್ ಅವರು ವಿವಿಧ ಸಮುದಾಯಗಳ ನಡುವೆ ದ್ವೇಷ ಹರಡಿದ್ದಷ್ಟೇ ಅಲ್ಲದೆ, ಕಾರ್ಯಾಗಾರದಲ್ಲಿ ಭಾಗಿಯಾಗಿದ್ದವರಿಗೆ ಗಲಭೆ ನಡೆಸುವಂತೆ ಪ್ರಚೋದನೆ ನಿಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಸಲ್ಮಾನ್ ಅವರು, ಇಸ್ಲಾಮಿಕ್ ತತ್ವಗಳ ಬೋಧಕ ಝಾಕೀರ್ ನಾಯ್ಕ್ ಮತ್ತು ಇತರ ಭಾಷಣಕಾರರ ಮಾತುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಆಲಿಸಿ, ತೀವ್ರಗಾಮಿಯಾಗಿ ಪರಿವರ್ತನೆ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮುಂಬೈನಲ್ಲಿಯೂ ಇಂಥದ್ದೇ ಕೃತ್ಯವೊಂದರಲ್ಲಿ ಭಾಗಿಯಾಗಿದ್ದ ಎಂದು ಹೇಳಿದ್ದಾರೆ.
ಸಲ್ಮಾನ್‌ನನ್ನು ಹಿಡಿದ ಸ್ಥಳೀಯರು, ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆತ ಗರ್ಭಗೃಹ ಪ್ರವೇಶಿಸಿ, ವಿಗ್ರಹ ಭಗ್ನಗೊಳಿಸಿರುವುದು ಸಿಸಿಟಿವಿ ಕ್ಯಾಮೆರಾ ಮೂಲಕ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಲ್ಮಾನ್‌ಗೆ ಆಂತರಿಕವಾಗಿ ಗಾಯಗಳಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.