ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಚಟ್ಟಂಚಾಲ್ ಕೋವಿಡ್ ಆಸ್ಪತ್ರೆ ಸನಿಹ ಹೆದ್ದಾರಿಯಲ್ಲಿ ಸ್ಕೂಟರ್‍ನಿಂದ ಬಿದ್ದು, ಗೃಹಿಣಿ ದಾರುಣವಾಗಿ ಮೃತಪಟ್ಟಿದ್ದಾರೆ. ಪೈಕ ಚಂದ್ರಂಪಾರ ನಿವಾಸಿ ಮಣಿ ಎಂಬವರ ಪತ್ನಿ ಶಶಿಕಲಾ(30)ಮೃತಪಟ್ಟ ಮಹಿಳೆ. ಗುರುವಾರ ರಾತ್ರಿ ತೆಕ್ಕಿಲ್‍ನ ಏರು ರಸ್ತೆಯಲ್ಲಿ ಪತಿ ಮಣಿ ಜತೆ ಸ್ಕೂಟರಲ್ಲಿ ಸಂಚರಿಸುತ್ತಿದ್ದ ಸಂದರ್ಭ ಏರು ರಸ್ತೆಯಲ್ಲಿ ಮುಂದಿನಿಂದ ಸಂಚರಿಸುತ್ತಿದ್ದ ಕಂಟೈನರ್ ಲಾರಿ ಏಕಾಏಕಿ ಹಿಂದಕ್ಕೆ ಚಲಿಸಿ ಸ್ಕೂಟರ್‍ಗೆ ಡಿಕ್ಕಿಯಾಗಿದೆ. ಈ ಸಂದರ್ಭ ಶಶಿಕಲಾ ರಸ್ತೆಗೆ ಬಿದ್ದಿದ್ದು, ಲಾರಿ ಇವರ ಶರೀರದ ಮೇಲಿಂದ ಲಾರಿ ಸಂಚರಿಸಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಸ್ಕೂಟರಲ್ಲಿದ್ದ ಮಣಿ, ಇವರ ನಾಲ್ಕು ವರ್ಷ ಪ್ರಾಯದ ಪುತ್ರಿ ಆರಾಧ್ಯ ಹಾಗೂ ಒಂದುವರೆ ವರ್ಷ ಪ್ರಾಯದ ಸಣ್ಣ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಮತ್ತು ಸಹ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಶಶಿಕಲಾ ಅವರು ಆರ್ಲಪದವು ನಿವಾಸಿ ಬಂಬ ಮಣಿಯಾಣಿ-ರತ್ನಾವತೀ ದಂಪತಿ ಪುತ್ರಿ. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.