ನವದೆಹಲಿ: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ಪೊಲೀಸ್ ವಶದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.
ನವದೆಹಲಿ: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ಪೊಲೀಸ್ ವಶದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.
ದೆಹಲಿಯ ವಿವಿಧ ಭಾಗಗಳಲ್ಲಿ ಸಭೆ ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿ ದೆಹಲಿ ಪೊಲೀಸರು ಹೊರಡಿಸಿದ್ದ ಆದೇಶವನ್ನು ಸಹ ಹಿಂಪಡೆಯಲಾಗಿದೆ ಎಂದು ಮೆಹ್ತಾ, ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠಕ್ಕೆ ತಿಳಿಸಿದ್ದರು.
ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ಬಂಧ ಮುಕ್ತಗೊಳಿಸಲಾಗಿದೆ. ಅವರು ಯಾವುದೇ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸದಿರುವವರೆಗೆ ಅವರ ಓಡಾಟವನ್ನು ನಿರ್ಬಂಧಿಸುವುದಿಲ್ಲ ಎಂದೂ ತುಷಾರ್ ಮೆಹ್ತಾ ನ್ಯಾಯ ಪೀಠಕ್ಕೆ ತಿಳಿಸಿದರು.
ವಾಂಗ್ಚುಕ್ ಬಿಡುಗಡೆ ಕೋರಿ ಮತ್ತು ನಿಷೇಧಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ದ್ವಿಸದಸ್ಯ ಪೀಠವು ನಡೆಸುತ್ತಿದೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಿ, ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಲೆಹ್‌ನಿಂದ ದೆಹಲಿಯವರೆಗೆ ಪಾದಯಾತ್ರೆ ನಡೆಸಿದ ವಾಂಗ್ಚುಕ್ ಸೇರಿದಂತೆ ಲಡಾಖ್‌ನ 120ಕ್ಕೂ ಹೆಚ್ಚು ಪಾದಯಾತ್ರಿಗಳನ್ನು ದೆಹಲಿ ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರತ್ಯೇಕ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದ ವಕೀಲ ಪ್ರಶಾಂತ್ ಭೂಷಣ್, ವಾಂಗ್ಚುಕ್ ಅವರಿಗೆ ಇನ್ನೂ ಮುಕ್ತವಾಗಿ ಓಡಾಡಲು ಅವಕಾಶ ನೀಡಿಲ್ಲ. ಅವರು ಇನ್ನೂ ನಿರ್ಬಂಧದಲ್ಲೇ ಇದ್ದಾರೆ ಎಂದು ಹೇಳಿದರು.