ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಭಾರತ ಸರ್ಕಾರದ ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಅಮೆರಿಕದ ತನಿಖಾಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ವಿಕಾಸ್ ಯಾದವ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುಲಿಗೆ ಪ್ರಕರಣವೊಂದರಲ್ಲಿ ವಿಕಾಸ್ ಯಾದವ್ ಅವರು ನಾಲ್ಕು ತಿಂಗಳು ತಿಹಾರ್ ಜೈಲಿನಲ್ಲಿದ್ದರು. ಬಳಿಕ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಮೆರಿಕದ ತನಿಖಾಧಿಕಾರಿಗಳ ಚಾರ್ಜ್‌ಶೀಟ್‌ನಲ್ಲಿ ಏನಿದೆ?
'39 ವರ್ಷದ ವಿಕಾಸ್ ಯಾದವ್ ಅವರು ಭಾರತದ ಗುಪ್ತಚರ ಸಂಸ್ಥೆ 'ರಿಸರ್ಚ್ ಆಯಂಡ್ ಅನಲಿಸಿಸ್ ವಿಂಗ್'ನ (ರಾ) ಕಚೇರಿ ಒಳಗೊಂಡಿರುವ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು' ಎಂದು ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್‌ನ ನ್ಯಾಯಾಲಯದಲ್ಲಿ ಗುರುವಾರ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಹತ್ಯೆ ಯತ್ನ ಪ್ರಕರಣದಲ್ಲಿ ಬಾಡಿಗೆ ಕೊಲೆಗಾರನನ್ನು ನೇಮಿಸಿದ ಮತ್ತು ಹಣ ಅಕ್ರಮ ವರ್ಗಾವಣೆಯ ಆರೋಪಗಳನ್ನು ಯಾದವ್ ಎದುರಿಸುತ್ತಿದ್ದಾರೆ. 'ಯಾದವ್ ತಲೆಮರೆಸಿಕೊಂಡಿದ್ದಾರೆ' ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿತ್ತು.
'ಅಮೆರಿಕನ್ನರನ್ನು ಗುರಿಯಾಗಿಸುವ ಮತ್ತು ಅವರನ್ನು ಅಪಾಯಕ್ಕೆ ಸಿಲುಕಿಸುವ ಪ್ರಯತ್ನಗಳನ್ನು ನ್ಯಾಯಾಂಗ ಇಲಾಖೆಯು ಸಹಿಸುವುದಿಲ್ಲ' ಎಂಬುದನ್ನು ಈ ಚಾರ್ಜ್‌ಶೀಟ್ ತೋರಿಸುತ್ತದೆ ಎಂದು ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಬಿ ಗಾರ್ಲ್ಯಾಂಡ್ ಹೇಳಿದ್ದರು.
'ಪನ್ನು ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆಯು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿರುವ ವ್ಯಕ್ತಿಯು ಭಾರತ ಸರ್ಕಾರದ ಉದ್ಯೋಗಿಯಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸ್ಪಷ್ಟಪಡಿಸಿದ್ದಾರೆ.