ನವದೆಹಲಿ: 'ಗಡಿಯಾರ'ವನ್ನು ಪಕ್ಷದ ಚಿಹ್ನೆಯಾಗಿ ತಾನು ಬಳಸಿಕೊಳ್ಳುವುದು ನ್ಯಾಯಾಲಯದ ಪರಿಶೀಲನೆಯಲ್ಲಿದೆ, ಅದು ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿದೆ ಎಂಬ ಸಂಗತಿಯನ್ನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಕರಪತ್ರಗಳಲ್ಲಿ ಸ್ಪಷ್ಟಪಡಿಸುವಂತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿದೆ.
ಚಿಹ್ನೆಯ ಬಳಕೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಸೂಚನೆಗಳನ್ನು ಅಜಿತ್ ಪವಾರ್ ಬಣ ಉಲ್ಲಂಘಿಸುತ್ತಿದೆ ಎಂದು ದೂರಿ ಶರದ್ ಪವಾರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಾಂಕರ್ ದತ್ತ ಮತ್ತು ಉಜ್ವಲ್ ಭುಯಾನ್ ಅವರು ಇದ್ದ ತ್ರಿಸದಸ್ಯ ಪೀಠವು ನಡೆಸಿತು.
ಮಾರ್ಚ್ 19 ಹಾಗೂ ಮಾರ್ಚ್ 24ರಂದು ನೀಡಿದ ಸೂಚನೆಗಳನ್ನು ಪಾಲಿಸುವುದಾಗಿ ಮುಚ್ಚಳಿಕೆ ಬರೆದುಕೊಡುವಂತೆ ಪೀಠವು ಅಜಿತ್ ಪವಾರ್ ಬಣಕ್ಕೆ ಸೂಚಿಸಿತು. ಮುಚ್ಚಳಿಕೆ ನೀಡದಿದ್ದರೆ, ಸ್ವಯಂಪ್ರೇರಿತವಾಗಿ ತಾನೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿತು.