ನವದೆಹಲಿ: ಇಂದು(ಬುಧವಾರ) ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಪುನಃ ರಾಷ್ಟ್ರ ರಾಜಧಾನಿಗೆ ಹಿಂದಿರುಗಿದೆ ಎಂದು ಮೂಲಗಳು ತಿಳಿಸಿವೆ.
180 ಪ್ರಯಾಣಿಕರಿದ್ದ QP1335 ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
ಮಂಗಳವಾರ 7 ವಿಮಾನಗಳಿಗೆ ಬೆದರಿಕೆ
ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಏಳು ವಿಮಾನಗಳಿಗೆ ಮಂಗಳವಾರ(ಅ.15) ಸಾಮಾಜಿಕ ಮಾಧ್ಯಮಗಳ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು.ಇವುಗಳಲ್ಲಿ ಎರಡು ಅಂತರರಾಷ್ಟ್ರೀಯ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿದ್ದವು.
ಅಯೋಧ್ಯೆ ಮೂಲಕ ಜೈಪುರದಿಂದ ಬೆಂಗಳೂರಿಗೆ, ದೆಹಲಿಯಿಂದ ಷಿಕಾಗೊಗೆ ಮತ್ತು ಮಧುರೈನಿಂದ ಸಿಂಗಪುರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾದ ಮೂರು ವಿಮಾನಗಳು, ದರ್ಭಂಗಾದಿಂದ ಮುಂಬೈಗೆ ಸಂಚರಿಸಿದ ಸ್ಪೈಸ್ ಜೆಟ್ ವಿಮಾನ ಹಾಗೂ ಸಿಲಿಗುರಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಸ ವಿಮಾನ, ಸೌದಿ ಅರೇಬಿಯಾದ ದಮಾಮ್‌ನಿಂದ ಲಖನೌಗೆ ಬರುತ್ತಿದ್ದ ಇಂಡಿಗೋ ವಿಮಾನ, ಅಮೃತಸರ-ಡೆಹ್ರಾಡೂನ್-ದೆಹಲಿ ಅಲೈಯನ್ಸ್ ವಿಮಾನಗಳಿಗೆ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಬೆದರಿಕೆ ಸಂದೇಶಗಳು ಬಂದಿದ್ದವು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು.ಮಧ್ಯಾಹ್ನ 2.25 ಗಂಟೆಗೆ ಅಯೋಧ್ಯೆಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಈ ವಿಮಾನವು ಸಂಜೆ 5 ಗಂಟೆಗೆ ಸಂಚಾರ ಆರಂಭಿಸಿತು.