ನವದೆಹಲಿ: ಭಾರತವನ್ನು ಒಕ್ಕೂಟ ರಾಷ್ಟ್ರವನ್ನಾಗಿ ಮಾಡಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕೊಡುಗೆಯನ್ನು ಅಳಿಸಿಹಾಕುವ ಯತ್ನಗಳು ನಡೆದಿದ್ದವು. ಅಲ್ಲದೆ, ದೀರ್ಘಕಾಲದವರೆಗೆ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕದಂತೆ ಪಿತೂರಿ ಮಾಡಲಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಆರೋಪ ಮಾಡಿದ್ದಾರೆ.
ಸರ್ದಾರ್ ಪಟೇಲರ ಜಯಂತಿ ಪ್ರಯುಕ್ತ ಇಲ್ಲಿನ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 'ಏಕತೆಗಾಗಿ ಓಟ'(ರನ್ ಫಾರ್ ಯುನಿಟಿ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ದಾರರು ಹರಿದು ಹಂಚಿಹೋಗಿದ್ದ 550 ಸಂಸ್ಥಾನಗಳನ್ನು ದೂರದೃಷ್ಟಿ ಹಾಗೂ ಚತುರತೆಯಿಂದ ಒಗ್ಗೂಡಿಸಿ ಏಕೀಕೃತ ಭಾರತವನ್ನು ನಿರ್ಮಾಣ ಮಾಡಿದ್ದರು ಎಂದು ಪ್ರಶಂಸಿಸಿದರು.
'ಲಕ್ಷದ್ವೀಪ ದ್ವೀಪ ಸಮೂಹಗಳಾಗಲೀ, ಜುನಾಗಢವಾಗಲೀ ಅಥವಾ ಹೈದರಾಬಾದ್ ಆಗಲೀ ಇಂದು ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದರೆ ಅದಕ್ಕೆ ಸರ್ದಾರ್ ಪಟೇಲರೇ ಕಾರಣ. ಅಷ್ಟಾಗಿಯೂ, ಕೆಲವು ಶಕ್ತಿಗಳು ಸರ್ದಾರರ ಕೊಡುಗೆಗಳನ್ನು ಅಳಿಸಿಹಾಕುವ ಯತ್ನ ನಡೆಸಿದ್ದವು. ಭಾರತರತ್ನ ಗೌರವವನ್ನು ಉದ್ದೇಶಪೂರ್ವಕವಾಗಿಯೇ ಬಹುವರ್ಷಗಳವರೆಗೆ ನೀಡದೆ ತಡೆಹಿಡಿಯಲಾಗಿತ್ತು' ಎಂದು ಶಾ ಅವರು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲರ ಧ್ಯೇಯ, ಆಲೋಚನೆ ಹಾಗೂ ಸಂದೇಶಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ. ಪಟೇಲರ ಅಗಾಧ ಕೊಡುಗೆಗಳ ಸ್ಮರಣಾರ್ಥವಾಗಿ 'ಏಕತಾ ಪ್ರತಿಮೆ' ನಿರ್ಮಾಣ ಮಾಡಿದ್ದಾರೆ. ಪಟೇಲರು ಹಾಕಿಕೊಟ್ಟಿದ್ದ ತಳಹದಿಯ ಮೇಲೆ ಭವ್ಯ ಭಾರತ ನಿರ್ಮಾಣಕ್ಕಾಗಿ ಪಣ ತೊಟ್ಟಿದ್ದು, 2047ರ ವೇಳೆಗೆ ದೇಶವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಎಂದರು.
ನವದೆಹಲಿಯ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ ಜಯಂತಿ ಪ್ರಯುಕ್ತ ಮಂಗಳವಾರ ಆಯೋಜಿಸಲಾಗಿದ್ದ 'ಏಕತೆಗಾಗಿ ಓಟ'ಕ್ಕೆ (ರನ್ ಫಾರ್ ಯುನಿಟಿ) ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು -ಪಿಟಿಐ ಚಿತ್ರ