ನವದೆಹಲಿ: ವಾಹನ ಅಪಘಾತ ಪ್ರಕರಣದಲ್ಲಿ ಪರಿಹಾರ ಕೇಳುತ್ತಿರುವ ವ್ಯಕ್ತಿಯು ಸಿದ್ಧಪಡಿಸಿದ ಅಂದಾಜು ಲೆಕ್ಕವೊಂದು, ಆತನಿಗೆ ಪರಿಹಾರ ನೀಡಲು ಇರುವ ಗರಿಷ್ಠ ಮಿತಿಯಾಗಿ ಪರಿಗಣಿತವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಅಲ್ಲದೆ, ರಸ್ತೆ ಅಪಘಾತದಲ್ಲಿ ಗಾಯಗೊಂಡು, ಅಂಗವೈಕಲ್ಯಕ್ಕೆ ತುತ್ತಾದ ಒಡಿಶಾದ ವ್ಯಕ್ತಿಯೊಬ್ಬನಿಗೆ ಘೋಷಿಸಿದ್ದ ಪರಿಹಾರದ ಮೊತ್ತ ₹30.99 ಲಕ್ಷ ಇದ್ದಿದ್ದನ್ನು ₹52.31 ಲಕ್ಷಕ್ಕೆ ಹೆಚ್ಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ರಾಜೇಶ್ ಬಿಂದಲ್ ಅವರು ಇದ್ದ ವಿಭಾಗೀಯ ಪೀಠವು, 'ತೊಂದರೆಗೆ ಒಳಗಾದ ವ್ಯಕ್ತಿಯು ಕೇಳಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಆತನಿಗೆ ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಮತ್ತು ಹೈಕೋರ್ಟ್ ಪರಿಹಾರ ರೂಪದಲ್ಲಿ ಘೋಷಿಸಬಾರದು ಎಂದೇನೂ ಇಲ್ಲ. ಆದರೆ ಹಾಗೆ ಹೆಚ್ಚಿನ ಮೊತ್ತ ಘೋಷಿಸುವುದು ನ್ಯಾಯಸಮ್ಮತವಾಗಿ, ಸಕಾರಣದಿಂದ ಕೂಡಿರಬೇಕು' ಎಂದು ಅಕ್ಟೋಬರ್ 15ರಂದು ನೀಡಿರುವ ತೀರ್ಪಿನಲ್ಲಿ ಹೇಳಿದೆ.
ಮೇಲ್ಮನವಿದಾರರಾದ ಚಂದ್ರಮಣಿ ನಂದಾ ಅವರು ಆರಂಭದಲ್ಲಿ ₹30 ಲಕ್ಷ ಪರಿಹಾರ ಕೋರಿದ್ದರು. ಆ ಮೊತ್ತ ಪಾವತಿಸುವಂತೆ ಹೈಕೋರ್ಟ್ ಈಗಾಗಲೇ ಆದೇಶಿಸಿದೆ. ಪರಿಹಾರ ಮೊತ್ತವನ್ನು ಹೆಚ್ಚು ಮಾಡಲು ಅವಕಾಶವಿಲ್ಲ ಎಂದು ವಿಮಾ ಕಂಪನಿ ಮಂಡಿಸಿದ್ದ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ.
'ಈ ವಾದವನ್ನು ನಾವು ಒಪ್ಪುವುದಿಲ್ಲ... ನ್ಯಾಯಸಮ್ಮತವಾದ ಪರಿಹಾರ ಮೊತ್ತವನ್ನು ತೀರ್ಮಾನಿಸುವುದು ಕೋರ್ಟ್‌ನ ಕರ್ತವ್ಯ. ಪರಿಹಾರ ಕೋರುತ್ತಿರುವ ವ್ಯಕ್ತಿಯು ಸಿದ್ಧಪಡಿಸಿದ ಕಚ್ಚಾ ಅಂದಾಜು ಲೆಕ್ಕಾಚಾರವೇ ಪರಿಹಾರ ನೀಡುವುದಕ್ಕೆ ಗರಿಷ್ಠ ಮಿತಿ ಆಗುವುದಿಲ್ಲ' ಎಂದು ಪೀಠವು ಸ್ಪಷ್ಟಪಡಿಸಿದೆ.
2014ರ ಜನವರಿಯಲ್ಲಿ ಒಡಿಶಾದ ನಾಲ್ಕು ಮಂದಿ ಸಂಬಲ್ಪುರದಿಂದ ಕಟಕ್‌ಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ನಾಲ್ಕು ಮಂದಿಯ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಇನ್ನುಳಿದ ಮೂವರು ಪ್ರತ್ಯೇಕವಾಗಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ 32 ವರ್ಷ ವಯಸ್ಸಿನ ವ್ಯಕ್ತಿಯು ಅಪಘಾತದ ಕಾರಣದಿಂದಾಗಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಅವರಿಗೆ ನ್ಯಾಯಮಂಡಳಿಯು ₹20.60 ಲಕ್ಷ ಪರಿಹಾರ ಘೋಷಿಸಿತ್ತು. ಇದನ್ನು ಹೈಕೋರ್ಟ್ ₹30.99 ಲಕ್ಷಕ್ಕೆ ಹೆಚ್ಚಿಸಿತ್ತು.