ಪಂಬಾ: ಶಬರಿಮಲೆಯಲ್ಲಿ ನೂತನ ಮೇಲ್ಶಾಂತಿಯನ್ನು ಆಯ್ಕೆ ಮಾಡಲಾಗಿದೆ. ಶಬರಿಮಲೆ ಮೇಲ್ಶಾಂತಿಯಾಗಿ ಎಸ್.ಅರುಣ್ ಕುಮಾರ್ ನಂಬೂದಿರಿ ಆಯ್ಕೆಯಾಗಿದ್ದಾರೆ. ಪಂದಳಂ ಅರಮನೆಯ ಕಿರಿಯವನಾದ ಋಷಿಕೇಶನ್ ಚೀಟಿ ಎತ್ತಿ ಈ ಆಯ್ಕೆ ನಡೆದಿದೆ.
ಉಷಃಪೂಜೆ ಬಳಿಕ 8ರ ನಂತರ ಆಯ್ಕೆ ಪ್ರಕ್ರಿಯೆ ನಡೆಯಿತು. ಎಸ್ ಅರುಣ್ ಕುಮಾರ್ ನಂಬೂದಿರಿ ಅವರು ಕೊಲ್ಲಂ ಶಕ್ತಿ ಕುಳಂಗರ ಮೂಲದವರು.ಈ ಹಿಂದೆ ಅಟ್ಟುಕ್ಕಾಲ್ ಕ್ಷೇತ್ರದ ಮಾಜಿ ಮೇಲ್ಶಾಂತಿಯಾಗಿದ್ದಾರೆ.
30 ವರ್ಷಗಳಿಂದ ವಿವಿಧ ದೇವಾಲಯಗಳಲ್ಲಿ ಮೇಲ್ಶಾಂತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕೊಲ್ಲಂ ಲಕ್ಷ್ಮೀನಾಡ್ ದೇವಸ್ಥಾನದ ಮೇಲ್ಶಾಂತಿಯಾಗಿದ್ದಾರೆ. ಎಲ್ಲವೂ ಅಯ್ಯಪ್ಪನ ಆಶೀರ್ವಾದ ಎಂದು ಅರುಣ್ ಕುಮಾರ್ ನಂಬೂದಿರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಕಳೆದ ಆರು ವರ್ಷಗಳಿಂದ ಶಬರಿಮಲೆ ಪರಮಶಾಂತಿಯಾಗಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿರುವರು.
ಟಿ ವಾಸುದೇವನ್ ನಂಬೂದಿರಿ ಅವರನ್ನು ಮಾಳಿಗಪ್ಪುರಂ ಸನ್ನಿಧಿಯ ಮೇಲ್ಶಾಂತಿಯಾಗಿ ಆಯ್ಕೆ ಮಾಡಲಾಗಿದೆ. ವಾಸುದೇವನ್ ನಂಬೂದಿರಿಯವರು ಕೋಝಿಕ್ಕೋಡ್ ನವರು. ಪಂದಳಂ ಅರಮನೆಯ ಕಿರಿಯ ಸದಸ್ಯರಾದ ವೈಷ್ಣವಿ ಮಾಳಿಗಪ್ಪುರಂ ಮೇಲ್ಶಾಂತಿಯ ನೇಮಕದಲ್ಲಿ ಭಾಗವಹಿಸಿ ಚೀಟಿ ಎತ್ತಿದರು. ಶಬರಿಮಲೆಗೆ 24 ಮತ್ತು ಮಾಳಿಗಪ್ಪುರಂಗೆ 15 ಮಂದಿ ಆಕಾಂಕ್ಷಿಗಳು ಅಂತಿಮ ಪಟ್ಟಿಯಲ್ಲಿದ್ದರು.
ನೂತನ ಮೇಲ್ಶಾಂತಿಗಳು ನವೆಂಬರ್ 15ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಈ ಮೂಲಕ ಅವರ ಪೂಜಾದಿಗಳ ಅವಧಿ ಆರಂಭವಾಗಲಿದೆ.