ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖನೂರ್ ಸೆಕ್ಟರ್ ಸಮೀಪದ ಅರಣ್ಯದಲ್ಲಿ ಅಡಗಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಮಂಗಳವಾರ ಬೆಳಿಗ್ಗೆ ಹತ್ಯೆಗೈದಿವೆ. ಇದರೊಂದಿಗೆ ಗಡಿನಿಯಂತ್ರಣ ರೇಖೆ ಸಮೀಪ ಕಳೆದ 27 ತಾಸು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಮೃತಪಟ್ಟಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸೋಮವಾರ ಸೇನಾ ಆಂಬುಲೆನ್ಸ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಭಯೋತ್ಪಾದಕರ ಪೈಕಿ ಒಬ್ಬನನ್ನು ಅದೇ ದಿನ ಸಂಜೆ ಹತ್ಯೆ ಮಾಡಲಾಗಿತ್ತು. ಉಳಿದ ಇಬ್ಬರನ್ನು ಮಂಗಳವಾರ ಬೆಳಿಗ್ಗೆ ಸದೆಬಡಿಯಲಾಗಿದೆ ಎಂದು ತಿಳಿಸಿದರು.
ಉಗ್ರರು ಭಾನುವಾರ ರಾತ್ರಿ ಗಡಿಯೊಳಗೆ ನುಸುಳಿರುವ ಸಾಧ್ಯತೆ ಇದೆ. ಆನಂತರ ಅವರು ದೇವಸ್ಥಾನದ ಹೊರಗೆ ಕಾಣಿಸಿಕೊಂಡು, ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಯವರು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ, ಬೆಳಿಗ್ಗೆ 7 ಗಂಟೆ ಸುಮಾರಿಗೆ ಹತ್ಯೆಗೈದರು. ಗುಂಡಿನ ದಾಳಿಯಲ್ಲಿ ನಾಲ್ಕು ವರ್ಷದ ಸೇನಾ ಶ್ವಾನ ಮೃತಪಟ್ಟಿದೆ ಎಂದು ತಿಳಿಸಿದರು.
ಗಡಿನಿಯಂತ್ರಣ ರೇಖೆಯುದ್ದಕ್ಕೂ ಸೇನೆ ಹದ್ದಿನ ಕಣ್ಣು ಶ್ರೀನಗರ: ಇತ್ತೀಚಿನ ಭಯೋತ್ಪಾದಕ ದಾಳಿ ಬೆನ್ನಲ್ಲೇ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗಸ್ತು ಮತ್ತು ಕಣ್ಗಾವಲನ್ನು ಬಲಪಡಿಸಿದೆ. ದಟ್ಟ ಅರಣ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಪತ್ತೆ ಮತ್ತು ಉಗ್ರರನ್ನು ಹಿಮ್ಮೆಟ್ಟಿಸಲು ಡ್ರೋನ್ ಮತ್ತು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. 'ಪ್ರಾದೇಶಿಕ ಗಸ್ತು ಹೆಚ್ಚಿಸಲಾಗಿದೆ ಖಚಿತ ಮಾಹಿತಿ ಮೇರೆಗೆ ಪ್ರದೇಶಗಳ ಸುತ್ತುವರಿಯುವುದು ಮತ್ತು ಗುಪ್ತಚರ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸುವುದನ್ನು ಹೆಚ್ಚಿಸಲಾಗಿದೆ' ಎಂದು ಮೂಲಗಳು ತಿಳಿಸಿವೆ.