ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಗಣತಿ ನಡೆಸಲು ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ.
ಜಾತಿಗಣತಿ ಮೂಲಕ ಮಾತ್ರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸ್ಥಾಪಿಸಲು ಸಾಧ್ಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
'ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಪ್ರಕ್ಷುಬ್ಧತೆ ನಡುವೆಯೂ ಶ್ರೀಲಂಕಾ ಇತ್ತೀಚೆಗೆ ಜನಸಂಖ್ಯೆ ಮತ್ತು ವಸತಿ ಗಣತಿಯ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ ಭಾರತದಲ್ಲಿ ಇನ್ನೂ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. 2021ರಲ್ಲಿಯೇ ದಶವಾರ್ಷಿಕ ಜನಗಣತಿ ನಡೆಯಬೇಕಿತ್ತು, ಆದರೆ ಇದುವರೆಗೂ ನಡೆದಿಲ್ಲ, ನಡೆಸುವ ಸೂಚನೆಯೂ ಕಾಣುತ್ತಿಲ್ಲ'ಎಂದು ಅವರು 'ಎಕ್ಸ್'ನಲ್ಲಿ ಹೇಳಿದ್ದಾರೆ.
'10 ಕೋಟಿಗೂ ಅಧಿಕ ಭಾರತೀಯರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013 ಅಥವಾ ಪಿ.ಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ 1951ರಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿದೆ. ಆದರೆ ಹಿಂದುಳಿದ ವರ್ಗ ಮತ್ತು ಇತರೆ ಜಾತಿಗಳ ವಿಚಾರವಾಗಿಯೂ ಇಂಥದ್ದೇ ಜನಗಣತಿಯ ಅಗತ್ಯ ಇದೆ ಎಂದು ಒತ್ತಿ ಹೇಳಿದರು.
ಜನಗಣತಿಯಲ್ಲಿ ಜಾತಿ ಸಂಬಂಧಿತ ವಿಷಯಗಳನ್ನು ಸೇರಿಸುವ ಬಗ್ಗೆ ಕಾಂಗ್ರೆಸ್ ಸೇರಿದಂತೆ ಇತರೆ ಎಲ್ಲಾ ರಾಜಕೀಯ ಪಕ್ಷಗಳ ಒತ್ತಾಯಿಸಿದರೂ ಈವರೆಗೂ ಉತ್ತರವೇ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.