ಕೋಲ್ಕತ್ತ: ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎನ್ನಲಾದ 10 ವರ್ಷದ ಹೆಣ್ಣು ಮಗುವಿನ ಮೃತದೇಹವನ್ನು ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ಕುಲ್ತಾಲಿಯಲ್ಲಿರುವ ಗ್ರಾಮಕ್ಕೆ ತಂದ ನಂತರ ರೊಚ್ಚಿಗೆದ್ದ ಸಾವಿರಾರು ಜನರು ರಸ್ತೆ ತಡೆ ಮತ್ತು ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದರು ಎಂದು ಪೊಲೀಸರು ಮಂಗಳವಾರ ತಿಳಿಸಿದರು.
ಅಕ್ಟೋಬರ್ 5ರಂದು ಟ್ಯೂಷನ್‌ಗೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ನಾಲ್ಕನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ನಂತರ ಬಾಲಕಿಯ ಮೃತದೇಹವನ್ನು ಕಾಂತಪುಕೂರಿಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಬಳಿಕ ಕಲ್ಕತ್ತ ಹೈಕೋರ್ಟ್ ಆದೇಶದ ಅನುಸಾರ ಮೃತದೇಹವನ್ನು ನಾದಿಯಾ ಜಿಲ್ಲೆಯ ಜೆಎನ್‌ಎಂ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಜೆಎನ್‌ಎಂನಿಂದ ಮೃತದೇಹವನ್ನು ಸೋಮವಾರ ರಾತ್ರಿ ಸ್ವಗ್ರಾಮಕ್ಕೆ ತಂದ ನಂತರ ಮಹಿಳೆಯರು ಸೇರಿದಂತೆ ಸಾವಿರಾರು ಗ್ರಾಮಸ್ಥರು ಕುಲ್ತಾಲಿಯಲ್ಲಿ ಧರಣಿ ನಡೆಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿದ ನಂತರ 'ನ್ಯಾಯ ಬೇಕು' ಎಂಬ ಘೋಷಣೆ ಕೂಗಿದರು.
ಪ್ರತಿಭಟನಕಾರರು ಮಂಗಳವಾರ ಬೆಳಿಗ್ಗೆ ಮಹಿಷ್ಮಾರಿ ಪೊಲೀಸ್ ಹೊರಠಾಣೆಯತ್ತ ಮೃತದೇಹದೊಂದಿಗೆ ಮೆರವಣಿಗೆಗೆ ಯತ್ನಿಸಿದರು. ಅವರನ್ನು ಪೊಲೀಸರು ತಡೆದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ನಂತರ ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ತೆಗೆದುಕೊಂಡು ಹೋದರು. ಅಲ್ಲಿ ಕೆಲ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದರು. ನಂತರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದರ ಮೂಲಕ ಪ್ರತಿಭಟನೆಯು ಹಿಂಸಾತ್ಮಕ ರೂಪ ತಾಳಿತು' ಎಂದು ತಿಳಿಸಿದರು.
'ಪ್ರತಿಭಟನಕಾರರ ಮನವೊಲಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದರು. ಆದರೆ ದುರ್ಗಾ ಪೂಜೆ ಸಂದರ್ಭದಲ್ಲಿ ಮುಷ್ಕರ ಮುಂದುವರಿಸುವುದಾಗಿ ಪ್ರತಿಭಟನಕಾರರು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳದಿಂದ ಪೊಲೀಸ್ ವಾಹನವೊಂದು ತೆರಳುತ್ತಿದ್ದಂತೆಯೇ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಧ್ವಂಸಕ್ಕೆ ಯತ್ನಿಸಿದರು. ವಾಹನದಲ್ಲಿ ಮಹಿಳಾ ಕಾನ್‌ಸ್ಟೆಬಲ್ ಸಹ ಇದ್ದರು. ನಂತರ ದಾಳಿಯಿಂದ ಹೇಗೋ ತಪ್ಪಿಸಿಕೊಂಡು ಹೋಗಲಾಯಿತು' ಎಂದು ಹೇಳಿದರು.
ಪೊಲೀಸ್ ವ್ಯವಸ್ಥೆ ಮೇಲೆ ನಮಗೆ ವಿಶ್ವಾಸ ಇಲ್ಲ. ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ' ಎಂದು ಪ್ರತಿಭಟನಕಾರ ನಿಮೈ ಸರ್ದಾರ್ ಹೇಳಿದರು.
ಬಾಲಕಿ ಪೋಷಕರನ್ನು ಭೇಟಿಯಾಗಲು ಜಯನಗರ ಸಂಸದ ಪ್ರತಿಮಾ ಮೋಂಡಲ್ ಅವರು ಬಂದಿದ್ದು, ಪ್ರತಿಭಟನಕಾರರು 'ಗೋ ಬ್ಯಾಕ್' ಘೋಷಣೆ ಕೂಗಿದರು.