ವಾಷಿಂಗ್ಟನ್: ಭಾರತದ ಆದ್ಯತೆಯು ತನ್ನ ಪ್ರಾಬಲ್ಯವವನ್ನು ಹೇರುವುದಲ್ಲ; ಬದಲಿಗೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಮೆರಿಕ, ಚೀನಾ ಅಥವಾ ಯಾವುದೇ ದೇಶ ಇಂದು ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಜಾಗತಿಕ ಅಭಿವೃದ್ಧಿ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಅವರು ಬುಧವಾರ ಈ ಮಾತು ಹೇಳಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ಅವರು ಇಲ್ಲಿಗೆ ಬಂದಿದ್ದಾರೆ.
'ವಿಶ್ವದ ಪ್ರತಿ ಆರು ಮಂದಿಯಲ್ಲಿ ಒಬ್ಬ ಭಾರತೀಯ. ನಮ್ಮ ಅರ್ಥ ವ್ಯವಸ್ಥೆಯನ್ನು ಹಾಗೂ ಅದು ಬೆಳೆಯುತ್ತಿರುವ ಬಗೆಯನ್ನು ಇತರರು ಉಪೇಕ್ಷಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.
ಭಾರತವು ಬಹುಪಕ್ಷೀಯ ಸಂಸ್ಥೆಗಳ ಪರವಾಗಿ ಯಾವಾಗಲೂ ನಿಂತಿದೆ ಎಂದು ಅವರು ಚರ್ಚೆಯ ಸಂದರ್ಭದಲ್ಲಿ ಹೇಳಿದ್ದಾರೆ.
'ಬಹುಪಕ್ಷೀಯ ವ್ಯವಸ್ಥೆಗಳನ್ನು ದುರ್ಬಲಗೊಳಿಸುವುದು ಯಾವ ಸಂದರ್ಭದಲ್ಲಿಯೂ ನಮಗೆ ಬೇಕಿಲ್ಲ. ಆದರೆ ಇಂತಹ ವ್ಯವಸ್ಥೆಗಳ ವಿಚಾರವಾಗಿ ಇದ್ದ ಭರವಸೆಗಳು ಹಾಗೂ ನಿರೀಕ್ಷೆಗಳು ಕಡಿಮೆ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಏಕೆಂದರೆ, ಇಂತಹ ವ್ಯವಸ್ಥೆಗಳಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂಬುದು ನಮ್ಮ ಭಾವನೆ' ಎಂದು ನಿರ್ಮಲಾ ಅವರು ಹೇಳಿದ್ದಾರೆ.