ನವದೆಹಲಿ: ಲಡಾಖ್‌ನ ಪೂರ್ವ ಭಾಗದಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ನಡುವೆ ಮಾತುಕತೆಗಳು ನಡೆಯುತ್ತಿರುವ ಹೊತ್ತಿನಲ್ಲಿ, ಉಪಗ್ರಹಗಳ ಮೂಲಕ ಸೆರೆಹಿಡಿದಿರುವ ಕೆಲವು ಹೊಸ ಚಿತ್ರಗಳು ಸೋಮವಾರ ಬಿಡುಗಡೆ ಆಗಿದ್ದು, ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ದಂಡೆಯ ಬಳಿ ಚೀನಾ ದೇಶದವರು ಭಾರಿ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಕೈಗೊಂಡಿರುವುದು ಅದರಲ್ಲಿ ಕಾಣುತ್ತಿದೆ.
ಭಾರತ ಮತ್ತು ಚೀನಾದ ಗಡಿ ಪ್ರದೇಶದಲ್ಲಿ, ಆಯಕಟ್ಟಿನ ಸ್ಥಳದಲ್ಲಿ ಈ ಸರೋವರ ಇದೆ. ಅಮೆರಿಕ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್ ಅಕ್ಟೋಬರ್ 9ರಂದು ಸೆರೆಹಿಡಿದಿರುವ ಚಿತ್ರಗಳು 70ಕ್ಕೂ ಹೆಚ್ಚು ಕಟ್ಟಡಗಳನ್ನು ನಿರ್ಮಾಣ ಮಾಡಿರುವುದನ್ನು ತೋರಿಸಿದೆ. ಈ ಕಟ್ಟಡಗಳು ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಸರಿಸುಮಾರು 38 ಕಿ.ಮೀ. ಪೂರ್ವಕ್ಕೆ ಇವೆ. ಈ ಪ್ರದೇಶವು ಚೀನಾಕ್ಕೆ ಸೇರಿದೆ.
ವಿವಾದಕ್ಕೆ ಒಳಗಾಗಿರುವ ಸ್ಥಳಗಳ ಸನಿಹದಲ್ಲಿ ಚೀನಾದ ಸೇನೆಯು ಹಲವು ಬಗೆಯ ಮೂಲಸೌಕರ್ಯಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಚಿತ್ರದಲ್ಲಿ ಇರುವವು ತೀರಾ ಈಚಿನ ನಿರ್ಮಾಣ ಕಾರ್ಯಗಳು. 2020ರ ಏಪ್ರಿಲ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ಉಂಟಾದ ನಂತರ ನಿರ್ಮಾಣ ಕಾರ್ಯಗಳು ವೇಗ ಪಡೆದುಕೊಂಡಿವೆ.
ಉಪಗ್ರಹಗಳ ಮೂಲಕ ತೆಗೆಯಲಾಗಿರುವ ಚಿತ್ರಗಳನ್ನು ಒಳಗೊಂಡು, ಎರಡು ಮಾಧ್ಯಮ ಸಂಸ್ಥೆಗಳು ಹೊಸ ನಿರ್ಮಾಣ ಕಾರ್ಯಗಳ ಬಗ್ಗೆ ವರದಿ ಮಾಡಿವೆ.
'ಪ್ಯಾಂಗಾಂಗ್ ತ್ಸೊ ಸರೋವರ ಉತ್ತರ ದಂಡೆಯಿಂದ ಕೇವಲ 8.5 ಕಿ.ಮೀ ದೂರದಲ್ಲಿ ಚೀನಾ ಭರದಿಂದ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದೆ. ಅಲ್ಲಿ 2024ರ ಏಪ್ರಿಲ್‌ನಲ್ಲಿ ಕೆಲಸ ಶುರುವಾದ ನಂತರದಲ್ಲಿ 100ಕ್ಕೂ ಹೆಚ್ಚು ಕಟ್ಟಡಗಳು ನಿರ್ಮಾಣ ಆಗಿವೆ' ಎಂದು ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ಪ್ರೊಫೆಸರ್ ವೈ. ನಿತಿಯಾನಂದಂ ಅವರು ಹೇಳಿರುವುದಾಗಿ ಮಾಧ್ಯಮ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.
ಹೊಸ ಚಿತ್ರಗಳ ವಿಚಾರವಾಗಿ ಭಾರತದ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗಿನ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಕೂಡ ಮೂಲಸೌಕರ್ಯ ನಿರ್ಮಾಣ ಕಾರ್ಯಗಳಿಗೆ ಒತ್ತು ನೀಡಿದೆ.