ವಯನಾಡ್ : ಮುಂದಿನ ತಿಂಗಳು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು, ಜುಲೈ 30ರಂದು ಇಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ನೆಲೆ ಕಳೆದುಕೊಂಡ ಸಂತ್ರಸ್ತರ ವಿಚಾರ ಕಣದಲ್ಲಿ ಪ್ರತಿಧ್ವನಿಸಲಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಭೂಕುಸಿತ ಸಂತ್ರಸ್ತರಿಗೆ ಇನ್ನೂ ಪುನರ್ವಸತಿ ಲಭಿಸದೇ ಇರುವ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ತಂತ್ರಗಾರಿಕೆ ರೂಪಿಸಿವೆ.
ಸರ್ಕಾರದ ಅಂಕಿಅಂಶದ ಪ್ರಕಾರ ಅವಘಡದಲ್ಲಿ 231 ಮಂದಿ ಮೃತಪಟ್ಟಿದ್ದಾರೆ. 47 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು, ವಯನಾಡ್ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರಿಂದ ನವೆಂಬರ್ 13ರಂದು ವಯನಾಡ್‌ನಲ್ಲಿ ಉಪ ಚುನಾವಣೆ ನಡೆಯಲಿದೆ.
ಕೇರಳ ಹೈಕೋರ್ಟ್‌ನಲ್ಲಿ ಎಸ್ಟೇಟ್ ಮಾಲೀಕರು ತಕರಾರು ಅರ್ಜಿ ಸಲ್ಲಿಸಿರುವುದರಿಂದ ಪುನರ್ವಸತಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯು ವಿಳಂಬವಾಗಿದೆ ಎಂದಿರುವ ಸ್ಥಳೀಯರು, ಆದಷ್ಟು ಬೇಗ ನೆಲೆ ಕಳೆದುಕೊಂಡವರಿಗೆ ಸೂರು ಒದಗಿಸಿಕೊಡುವ ಕೆಲಸ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯ ಅನ್ವಯ ನೆಡುಂಬಳದ ಹ್ಯಾರಿಸನ್ ಮಲಯಾಳಂ ಎಸ್ಟೇಟ್, ಮೇಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಕಲ್ಪೆಟ್ಟದ ಎಲ್‌ಸ್ಟನ್ ಎಸ್ಟೇಟ್‌ನ ಸ್ಥಳಗಳನ್ನು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನಿಗದಿಪಡಿಸಲಾಗಿದೆ.
ಸಾಲ ಮನ್ನಾ ಮಾಡಬೇಕು, ಸದ್ಯಕ್ಕೆ ನೀಡುತ್ತಿರುವ ಬಾಡಿಗೆ ದರವನ್ನು ಏರಿಸಬೇಕು ಎನ್ನುವುದೂ ಸೇರಿ ಕೆಲವು ಬೇಡಿಕೆಗಳನ್ನು ಸಂತ್ರಸ್ತರು ಸರ್ಕಾರದ ಮುಂದಿಟ್ಟಿದ್ದಾರೆ. ಅವುಗಳಿಗೆ ಇನ್ನೂ ಸರ್ಕಾರ ಸ್ಪಂದಿಸಿಲ್ಲ.
ಎಲ್‌ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ ಅವರು ಸಂತ್ರಸ್ತರು ನೆಲಸಿರುವ ಬಾಡಿಗೆ ಮನೆಗಳಿಗೆ ಶನಿವಾರ ಭೇಟಿ ನೀಡಿದರು. ಪುನರ್ವಸತಿ ಕಾಮಗಾರಿಯಲ್ಲಿ ಸದ್ಯದ ಕೇರಳ ಸರ್ಕಾರದ ಕಾರ್ಯವೈಖರಿಯು ವಿಶ್ವದಲ್ಲೇ ಮಾದರಿಯಾದುದು ಎಂದು ಅವರು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಪುನರ್ವಸತಿ ಕಾಮಗಾರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಯಾವುದೇ ನೆರವು ದೊರೆಯುತ್ತಿಲ್ಲ ಎಂದೂ ಅವರು ಟೀಕಿಸಿದರು.
-ನಸೀರ್ ಅಲಕ್ಕಳ್, ಅಧ್ಯಕ್ಷ ಜನಶಬ್ದಂ ಕ್ರಿಯಾ ಸಮಿತಿಸಂತ್ರಸ್ತರ ಸಮಸ್ಯೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಪ್ರಿಯಾಂಕಾ ಗಾಂಧಿ ಅವರು ಸಮಾವೇಶ ಕೈಗೊಳ್ಳುವ ಸಂದರ್ಭ ಅದನ್ನೆ ಸೂಕ್ತ ಎಂದುಕೊಂಡಿರುವೆ.ಚೂರಲ್‌ಮಲಾ ಹಾಗೂ ಮುಂಡಕ್ಕೈಗೆ ತಮ್ಮ ಸಹೋದರ ರಾಹುಲ್ ಗಾಂಧಿ ಜತೆ ಭೇಟಿ ನೀಡಿದಾಗ ಕಂಡಿದ್ದ ಚಿತ್ರಣಗಳು ಮನಕಲವಕುವಂತಿದ್ದವು ಎಂದು ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಮತದಾರರಿಗೆ ಬರೆದ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿರುವ ನವ್ಯಾ ಹರಿದಾಸ್ ಪ್ರಕಾರ ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ನೆರವಿನಲ್ಲಿ ಒಂದು ರೂಪಾಯಿಯನ್ನೂ ಕೇರಳ ಸರ್ಕಾರ ಸಂತ್ರಸ್ತರಿಗೆ ತಲುಪಿಸಿಲ್ಲ. ಆದರೆ, ಕೇರಳದ ಕಂದಾಯ ಸಚಿವ ಕೆ. ರಂಜನ್ ಅವರು ಹೇಳುವುದು ಬೇರೆಯದೇ ಮಾತು. ಪರಿಹಾರ ಬಿಡುಗಡೆ ವಿಷಯದಲ್ಲಿ ಕೇಂದ್ರ ಸರ್ಕಾರವು ನಕಾರಾತ್ಮಕ ಧೋರಣೆ ತಳೆದಿದೆ ಎನ್ನುವುದು ಅವರ ಅಭಿಪ್ರಾಯ.
'ಸಂತ್ರಸ್ತರಿಗೆ ಸರ್ಕಾರವು ತಿಂಗಳಿಗೆ ₹6000 ಬಾಡಿಗೆ ನೀಡುತ್ತಿದೆ. ವಾಸ್ತವದಲ್ಲಿ ಬಹುತೇಕ ಸಂತ್ರಸ್ತರು ತಿಂಗಳಿಗೆ ₹10,000 ಬಾಡಿಗೆ ಕೊಡುವಂತಹ ಮನೆಗಳಲ್ಲಿ ವಾಸವಿದ್ದಾರೆ' ಎಂದು ಜನಕ್ರಿಯಾ ಸಮಿತಿಯ ಸಂಚಾಲಕರೂ ಆಗಿರುವ ಮನೋಜ್ ಹೇಳುತ್ತಾರೆ. ಅವರೂ ವಯನಾಡ್ ಭೂಕುಸಿತದ ದುರಂತದ ಸಂತ್ರಸ್ತರಲ್ಲಿ ಒಬ್ಬರು.