ಕೋಲ್ಕತ್ತ: ದುರ್ಗಾ ಪೂಜೆಯ ವೇಳೆಯಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ ಮಟನ್ ಬಿರಿಯಾನಿ, ಬಸಂತಿ ಪಲಾವ್ ಸೇರಿ ಹಲವು ಬೆಂಗಾಲಿ ಖಾದ್ಯಗಳನ್ನು ನೀಡಲು ಪಶ್ಚಿಮ ಬಂಗಾಳದ ಗೃಹ ಇಲಾಖೆ ನಿರ್ಧರಿಸಿದೆ. ಹಬ್ಬದ ಸಂತೋಷವನ್ನು ಕೈದಿಗಳೂ ಅನುಭವಿಸಬೇಕು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದುರ್ಗಾ ಪೂಜೆ ಆರಂಭವಾಗುವ ಅಕ್ಟೋಬರ್ 9ರಿಂದ ಅಕ್ಟೋಬರ್ 12ರವರೆಗೆ ಕೈದಿಗಳಿಗೆ ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡುವ ಮಧ್ಯಾಹ್ನ ಹಾಗೂ ರಾತ್ರಿ ಊಟದ ಮೆನುವಿನಲ್ಲಿ ವಿಶೇಷ ಖಾದ್ಯಗಳು ಇರಲಿವೆ.
'ಪ್ರತಿ ಹಬ್ಬದ ಸಮಯದಲ್ಲಿ ಉತ್ತಮ ಆಹಾರಕ್ಕಾಗಿ ಕೈದಿಗಳಿಂದ ವಿನಂತಿಗಳು ಬರುತ್ತವೆ. ನಾವು ಈ ವರ್ಷ ಹೊಸ ಮೆನು ಸಿದ್ದಪಡಿಸಿದ್ದೇವೆ. ಇದು ಅವರ ಮುಖದಲ್ಲಿ ನಗು ತರುತ್ತದೆ ಎನ್ನುವ ಭರವಸೆ ಇದೆ. ವೈಯಕ್ತಿಕವಾಗಿ ಅವರನ್ನು ಸುಧಾರಿಸಲು ಇದು ಅತ್ಯಂತ ಸಕಾರಾತ್ಮಕ ಕ್ರಮವೆಂದು ನಾನು ಭಾವಿಸುತ್ತೇನೆ' ಎಂದು ಅಧಿಕಾರಿ ಹೇಳಿದ್ದಾರೆ.
ಅಡುಗೆ ಕೆಲಸ ಮಾಡುವ ಕೈದಿಗಳೇ ಈ ವಿಶೇಷ ಖಾದ್ಯಗಳನ್ನು ತಯಾರಿಸಲಿದ್ದಾರೆ.
ಮೀನು ಸಾರು, ಪೂರಿ, ಬೆಂಗಾಳಿ ಚನಾ ದಾಲ್, ಬೆಂಗಾಳಿ ಗಂಜಿ, ಕೋಳಿ ಸಾರು, ಸೋರೆಕಾಯಿ ಮತ್ತು ಆಲೂಗಡ್ಡೆಯೊಂದಿಗೆ ಸಿಗಡಿ, ರಾಯಿತಾ, ಬಸಂತಿ ಪುಲಾವ್ ಜೊತೆ ಮಟನ್ ಬಿರಿಯಾನಿ ಮೆನುವಿನಲ್ಲಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಕೈದಿಗಳ ಧಾರ್ಮಿಕ ಭಾವನೆಯನ್ನು ಗೌರವಿಸಲು ಎಲ್ಲರಿಗೂ ಮಾಂಸಾಹಾರವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಅನೇಕ ಬಂಗಾಳಿಗಳಿಗೆ ಅಥವಾ ರಾಜ್ಯದಲ್ಲಿ ವರ್ಷಗಳಿಂದ ವಾಸಿಸುವ ವಿವಿಧ ಸಮುದಾಯಗಳ ಜನರಿಗೆ, ದುರ್ಗಾ ಪೂಜೆ ಮತ್ತು ಇತರ ಹಬ್ಬಗಳ ವೇಳೆ ತಮ್ಮ ತಟ್ಟೆಯಲ್ಲಿ ಮೀನು ಮತ್ತು ಮಾಂಸದ ಪದಾರ್ಥಗಳಿಲ್ಲದೆ ಅಪೂರ್ಣವಾಗುತ್ತವೆ. ಆದ್ದರಿಂದ ನಾವು ಅವರ ಪಾಕಪದ್ಧತಿಯಲ್ಲಿ ವೈವಿಧ್ಯತೆಯನ್ನು ತರಲು ಪ್ರಯತ್ನಿಸಿದ್ದೇವೆ. ಬೆಂಗಾಲಿಗಳಾಗಿ ಅವರು ಇದನ್ನು ಆನಂದಿಸುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.