ತಿರುವನಂತಪುರ: ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಹಿರಿಯ ನಾಯಕ ಸತ್ಯನ್ ಮೊಕೇರಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಸಿಪಿಐ ರಾಜ್ಯ ಸಮಿತಿ ಸಭೆಯಲ್ಲಿ ಸತ್ಯನ್ ಮೊಕೇರಿ ಅವರನ್ನು ಅಭ್ಯರ್ಥಿಯನ್ನಾಗಿ ಪ್ರಸ್ತಾಪಿಸಲಾಗಿತ್ತು.
ಈ ಹಿಂದೆ 2014ರಲ್ಲಿ ಸತ್ಯನ್ ಮೊಕೇರಿ ಅವರು ವಯನಾಡ್‍ನಿಂದ ಸಂಸತ್ತಿಗೆ ಸ್ಪರ್ಧಿಸಿದ್ದರು. ಅವರು ಸುಮಾರು ಇಪ್ಪತ್ತು ಸಾವಿರ ಮತಗಳಿಂದ ಪರಾಭವಗೊಂಡಿದ್ದರು.
ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ರಾಜ್ಯ ಕಾರ್ಯದರ್ಶಿ ಬಿನೊಯ್ ವಿಶ್ವಂ ಅವರು ವಯನಾಡು ಕ್ಷೇತ್ರದ ವ್ಯಾಪ್ತಿಯ ನಾಲ್ಕು ಜಿಲ್ಲಾ ಘಟಕಗಳು ನೀಡಿದ ಪಟ್ಟಿಯನ್ನು ಆಧರಿಸಿ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆಸಿದರು.
ರಾಷ್ಟ್ರೀಯ ಸಮಿತಿ ಸದಸ್ಯ ಸತ್ಯನ್ ಮೊಕೇರಿ, ಎಐವೈಎಫ್ ಮುಖಂಡ ಟಿ.ಟಿ.ಜಿಸ್ಮನ್, ಮಹಿಳಾ ಫೆಡರೇಷನ್ ಮುಖಂಡರಾದ ಪಿ. ವಸಂತಮ್ಮ ಮತ್ತು ಇ.ಎಸ್.ಬಿಗಿಮೋಳ್ ಹೆಸರು ಪಟ್ಟಿಯಲ್ಲಿದ್ದರೂ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಹಾಗೂ ರಾಜಕೀಯ ಪೈಪೋಟಿಗೆ ಯೋಗ್ಯ ಎಂಬ ಅಂಶಗಳನ್ನು ಪರಿಗಣಿಸಿ ಸತ್ಯನ್ ಮೊಕೇರಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.