ಗಾಜಿಯಾಬಾದ್: ರೋಟಿ ಮಾಡಲು ಬಳಸುತ್ತಿದ್ದ ಹಿಟ್ಟಿನಲ್ಲಿ ಮೂತ್ರ ಬೆರೆಸುತ್ತಿದ್ದ ಮನೆಗೆಲಸದ ಮಹಿಳೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ.
8 ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಗೆಲಸದಾಕೆ ಈ ದುಷ್ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾಳೆ.
ಮನೆಗೆಲಸದ ಮಹಿಳೆಯನ್ನು ಶಾಂತಿನಗರ ಕಾಲೋನಿಯ ರೀನಾ(32) ಎಂದು ಗುರುತಿಸಲಾಗಿದೆ. ಮಹಿಳೆಯ ದುಷ್ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಉದ್ಯಮಿ ನಿತಿನ್ ಗೌತಮ್ ಅವರ ಪತ್ನಿ ರೂಪಂ ಯಾವುದೋ ದುಷ್ಕೃತ್ಯ ನಡೆಯುತ್ತಿದೆ ಎಂದು ಶಂಕಿಸಿದ್ದಾರೆ. ಬಳಿಕ, ಮನೆಗೆಲಸದ ಮಹಿಳೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ. ರೋಟಿ ಹಿಟ್ಟಿಗೆ ಮಹಿಳೆ ಮೂತ್ರ ಬೆರೆಸುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಮಾಲೀಕರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ರೀನಾಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ, ಆರಂಭದಲ್ಲಿ ಆರೋಪ ಅಲ್ಲಗಳೆದ ಮನೆಗೆಲಸದ ಮಹಿಳೆ, ಬಳಿಕ, ವಿಡಿಯೊ ತೋರಿಸಿ ಪ್ರಶ್ನಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸಣ್ಣ ಸಣ್ಣ ತಪ್ಪುಗಳಿಗೂ ಮನೆಯವರು ಬೈಯುತ್ತಿದ್ದರಿಂದ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ಹೇಳಿದ್ದಾಳೆ ಎಂದು ಎಸಿಪಿ ಲಿಪಿನಾ ಗೈಚ್ ಹೇಳಿದ್ದಾರೆ.
ರೀನಾ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 272(ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಆಹಾರ ಪದಾರ್ಥಗಳಿಗೆ ಮೂತ್ರ ಮತ್ತು ಉಗುಳು ಸೇರಿದಂತೆ ಮಾನವ ತ್ಯಾಜ್ಯವನ್ನು ಸೇರಿಸುವ ಇದೇ ರೀತಿಯ ಘಟನೆಗಳು ಉತ್ತರಪ್ರದೇಶದ ಹಲವು ಸ್ಥಳಗಳಿಂದ ವರದಿಯಾಗಿವೆ.
ಇಂತಹ ಘಟನೆಗಳ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಸರ್ಕಾರವು ತಮ್ಮ ಗುರುತನ್ನು ಮರೆಮಾಚುವ ಮತ್ತು ಆಹಾರ ಪದಾರ್ಥಗಳು ಹಾಗೂ ಪಾನೀಯಗಳಲ್ಲಿ ಮಾನವ ತ್ಯಾಜ್ಯ ಅಥವಾ ತಿನ್ನಲಾಗದ ವಸ್ತುಗಳನ್ನು ಬೆರೆಸುವ ಮಾರಾಟಗಾರರ ವಿರುದ್ಧ ಶೀಘ್ರದಲ್ಲೇ ಹೊಸ ಕಾನೂನನ್ನು ಪರಿಚಯಿಸುವುದಾಗಿ ಘೋಷಿಸಿದೆ.