ಮಂಜೇಶ್ವರ: ಒತ್ತಡ ಹಾಗೂ ಜಂಜಾಟದ ಜೀವನ ನಡೆಸುತ್ತಿರುವ ನಾವೆಲ್ಲರೂ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಶ್ರೀ ಸಾಯಿನಿಕೇತನ ಸೇವಾ ಸಂಸ್ಥೆಯ ಆಪ್ತ ಸಮಾಲೋಚಕ ಸಿಬ್ಬಂದಿ ಕುಸುಮಾಧರ್ ಹೇಳಿದರು.
ಅವರು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಶ್ರೀ ಸಾಯಿ ನಿಕೇತನ ಸೇವಾ ಸಂಸ್ಥೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಭದ್ರತೆ, ಭಾವನಾತ್ಮಕ ಸ್ಥಿರತೆ ಮತ್ತು ಮಾನಸಿಕ ಯೋಗಕ್ಷೇಮ ನಮ್ಮ ಮಾನಸಿಕ ಆರೋಗ್ಯದಿಂದ ಪ್ರಭಾವಿತವಾಘಿದ್ದು, ನಮ್ಮ ವರ್ತನೆಗಳು, ಭಾವನೆಗಳು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಉದಯ್ ಕುಮಾರ್, ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದ,ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಸಂಸ್ಥೆಯ ಆಪ್ತ ಸಮಾಲೋಚಕಿ ಸಿಬ್ಬಂದಿ ಜೀವಿತ ಸ್ವಾಗತಿಸಿದರು. ಅರ್ಪಿತಾ ವಂದಿಸಿದರು. ಈ ಸಂದರ್ಭ ಆಶ್ರಮವಾಸಿಗಳು ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.