ಇಸ್ರೇಲ್ :ಇಸ್ರೇಲ್ ಹಾಗೂ ಲೆಬನಾನ್ ನ ಹಿಝ್ಬುಲ್ಲಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇದು ಭಾರತದ ಕಳವಳಕ್ಕೂ ಕಾರಣವಾಗಿದೆ.
ದಕ್ಷಿಣ ಲೆಬನಾನ್ ನಲ್ಲಿ ನಿಯೋಜಿಸಲಾಗಿರುವ ವಿಶ್ವ ಸಂಸ್ಥೆ ಶಾಂತಿಪಾಲನಾ ಪಡೆಯಲ್ಲಿರುವ ಭಾರತದ ಯೋಧರ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತವು, ಯಾವುದೇ ದೇಶವಾದರೂ ವಿಶ್ವ ಸಂಸ್ಥೆ ಶಾಂತಿ ಪಾಲನಾ ಪಡೆಯ ಆವರಣದ ಪಾವಿತ್ರ್ಯತೆಯನ್ನು ಗೌರವಿಸಬೇಕು ಎಂದು ಆಗ್ರಹಿಸಿದೆ.
ಇದಕ್ಕೂ ಮುನ್ನ, ಈ ಪ್ರಾಂತ್ಯದಲ್ಲಿ ಹಿಝ್ಬುಲ್ಲಾ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಇಸ್ರೇಲ್, ದಕ್ಷಿಣ ಲೆಬನಾನ್ ನಲ್ಲಿ ನಿಯೋಜಿಸಲಾಗಿರುವ ವಿಶ್ವ ಸಂಸ್ಥೆ ಶಾಂತಿ ಪಾಲನಾ ಪಡೆಯ ಮೇಲೂ ಗುಂಡಿನ ದಾಳಿ ನಡೆಸಿತ್ತು.
ಈ ಸಂಬಂಧ ಅಕ್ಟೋಬರ್ 11ರಂದು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, "ನೀಲಿ ಮಾರ್ಗದಲ್ಲಿ ಕುಂಠಿತಗೊಳ್ಳುತ್ತಿರುವ ಭದ್ರತಾ ಪರಿಸ್ಥಿತಿಯ ಕುರಿತು ನಾವು ಕಳವಳಗೊಂಡಿದ್ದೇವೆ. ನಾವು ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸುವುದನ್ನು ಮುಂದುವರಿಸಲಿದ್ದೇವೆ. ಎಲ್ಲರೂ ವಿಶ್ವಸಂಸ್ಥೆ ಆವರಣದ ಗಡಿಯನ್ನು ಗೌರವಿಸಬೇಕಿದೆ ಹಾಗೂ ವಿಶ್ವ ಸಂಸ್ಥೆ ಶಾಂತಿಪಾಲಕರ ಸುರಕ್ಷತೆಯನ್ನು ಖಾತರಿ ಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇದರೊಂದಿಗೆ ಅವರ ಆದೇಶದ ಪಾವಿತ್ರ್ಯವನ್ನು ಖಾತರಿ ಪಡಿಸಬೇಕಿದೆ" ಎಂದು ಆಗ್ರಹಿಸಿದೆ.
ಲೆಬನಾನ್ ನಲ್ಲಿನ ವಿಶ್ವ ಸಂಸ್ಥೆ ಶಾಂತಿ ಪಾಲನಾ ಪಡೆಯಲ್ಲಿ 900 ಮಂದಿ ಭಾರತೀಯ ಯೋಧರಿದ್ದು, ಅವರನ್ನು ಇಸ್ರೇಲ್-ಲೆಬನಾನ್ ಗಡಿಗುಂಟ ಇರುವ 120 ಕಿ.ಮೀ. ನೀಲಿ ಮಾರ್ಗದಲ್ಲಿ ನಿಯೋಜಿಸಲಾಗಿದೆ.
ಇಸ್ರೇಲ್ ಹಾಗೂ ಲೆಬನಾನ್ ನ ಹಿಝ್ಬುಲ್ಲಾ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಲೆಬನಾನ್ ನಲ್ಲಿರುವ ವಿಶ್ವ ಸಂಸ್ಥೆ ಮಧ್ಯಂತರ ಪಡೆಯ ಆವರಣದ ಮೇಲೂ ಇಸ್ರೇಲ್ ಪಡೆಗಳು ಗುಂಡಿನ ದಾಳಿ ನಡೆಸಿವೆ.
ಮೂಲಗಳ ಪ್ರಕಾರ, ಶುಕ್ರವಾರ ವಿಶ್ವ ಸಂಸ್ಥೆ ಶಾಂತಿಪಾಲನಾ ಪಡೆ ಮುಖ್ಯ ಕಚೇರಿಯ ಇಟಲಿ ತುಕಡಿಯ ಮೇಲೆ ಇಸ್ರೇಲಿ ಡಿಫೆನ್ಸ್ ಫೋರ್ಸ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಅಕ್ಟೋಬರ್ 10ರಂದು ಇಸ್ರೇಲ್ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಇಬ್ಬರು ಇಂಡೋನೇಷಿಯ ಶಾಂತಿಪಾಲಕರು ಗಾಯಗೊಂಡ ನಂತರ, ಇದು ಎರಡನೆಯ ಘಟನೆಯಾಗಿದೆ.
ಲೆಬನಾನ್ ನಲ್ಲಿ ನಿಯಂತ್ರಿತ ಭೂ ಆಕ್ರಮಣ ಮುಂದುವರಿಸುವ ತನ್ನ ಉದ್ದೇಶವನ್ನು ಇಸ್ರೇಲಿ ಡಿಫೆನ್ಸ್ ಫೋರ್ಸ್ ತಿಳಿಸಿದೆ ಎಂದು ಲೆಬನಾನ್ ವಿಶ್ವ ಸಂಸ್ಥೆ ಮಧ್ಯಂತರ ಪಡೆ ದೃಢಪಡಿಸಿದೆ. ಈ ಬೆಳವಣಿಗೆಗಳ ನಡುವೆಯೂ, ಶಾಂತಿಪಾಲಕರು ತಮ್ಮ ತಮ್ಮ ಸ್ಥಳಗಳಲ್ಲಿ ನಿಯೋಜಿತರಾಗಿರಲಿದ್ದಾರೆ ಎಂದೂ ಹೇಳಿದೆ. ಪ್ರಕ್ಷುಬ್ಧತೆಯನ್ನು ತೀವ್ರಗೊಳಿಸುವುದರಿಂದ ಎಲ್ಲರೂ ದೂರ ಉಳಿಯಬೇಕು ಎಂದು ಲೆಬನಾನ್ ಮಧ್ಯಂತರ ಪಡೆಯು ಆಗ್ರಹಿಸಿದೆ.