ತಿರುವನಂತಪುರ: ಪ್ರಸಕ್ತ ಸಾಲಿನ ರಾಜ್ಯಮಟ್ಟದ ಶಾಲಾ ಕಲೋತ್ಸವ ಮುಂದಿನ ಜನವರಿಯಲ್ಲಿ(2025) ತಿರುವನಂತಪುರದಲ್ಲಿ ನಡೆಸಲಾಗುವುದೆಂದು ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಹೇಳಿದ್ದಾರೆ.
ಈ ಹಿಂದೆ ಡಿಸೆಂಬರ್ 3 ರಿಂದ 7 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಡಿಸೆಂಬರ್ 4 ರಂದು ರಾಷ್ಟ್ರೀಯ ಸಾಧನೆ ಪರೀಕ್ಷೆ ನಡೆಯಲಿರುವ ಕಾರಣ ದಿನಾಂಕವನ್ನು ಬದಲಾಯಿಸಲಾಗಿದೆ. ಅದರಂತೆ ಶಾಲಾ ಮಟ್ಟ, ಉಪಜಿಲ್ಲೆ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳೂ ಬದಲಾಗಲಿವೆ. ಶಾಲಾ ಮಟ್ಟದ ಸ್ಪರ್ಧೆಗಳು ಅಕ್ಟೋಬರ್ 15 ರೊಳಗೆ, ಉಪಜಿಲ್ಲಾ ಮಟ್ಟದ ಸ್ಪರ್ಧೆಗಳು ನವೆಂಬರ್ 10 ರೊಳಗೆ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳು ಡಿಸೆಂಬರ್ 3 ರೊಳಗೆ ಪೂರ್ಣಗೊಳ್ಳಲಿವೆ.
ಶಾಲಾ ಆವರಣವನ್ನು ಕಸಮುಕ್ತವಾಗಿಸಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಪ್ರೋಟೋಕಾಲ್ ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ನವೆಂಬರ್ 1 ರ ವೇಳೆಗೆ ಶೇಕಡಾ 50 ರಷ್ಟು ಶಾಲೆಗಳನ್ನು ಹಸಿರು ಶಾಲೆಗಳೆಂದು ಘೋಷಿಸಲಾಗುವುದು ಮತ್ತು ಡಿಸೆಂಬರ್ 31 ರೊಳಗೆ ಶೇಕಡಾ 100 ರಷ್ಟು ಶಾಲೆಗಳನ್ನು ಹಸಿರು ಶಾಲೆಗಳೆಂದು ಘೋಷಿಸಲಾಗುವುದು. ನ.1ರಂದು ಮುಖ್ಯಮಂತ್ರಿಗಳ ಮಾದಕ ವಸ್ತು ವಿರೋಧಿ ಸಂದೇಶವನ್ನು ಮಕ್ಕಳ ಮೂಲಕ ಮನೆ ಮನೆಗೆ ತಲುಪಿಸಲಾಗುವುದು. ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು. 100 ದಿನಗಳ ಕಾರ್ಯಕ್ರಮದ ಅಂಗವಾಗಿ ಶಿಕ್ಷಣ ಇಲಾಖೆಯಲ್ಲಿ 33 ಮತ್ತು ಕಾರ್ಮಿಕ ಇಲಾಖೆಯಲ್ಲಿ 8 ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.