ಬದಿಯಡ್ಕ: ಕುಂಬಳೆ ಸೀಮೆಯ ಪ್ರಸಿದ್ದ ವೈದಿಕರಾದ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟ(84) ಅವರು ಭಾನುವಾರ ರಾತ್ರಿ ಉಡುಪಿಯಲ್ಲಿರುವ ತಮ್ಮ ಪುತ್ರನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಜಾಹ್ನವಿ, ಪುತ್ರರಾದ ಸುಬ್ರಹ್ಮಣ್ಯ, ಶಿವಶಂಕರ, ಶಶಿಧರ, ಪುತ್ರಿ ಶೈಲಜಾ ಹಾಗೂ ೫ ಮಂದಿ ಸಹೋದರರು, 6 ಮಂದಿ ಸಹೋದರಿಯರು ಅಲ್ಲದೆ ಅಪಾರ ಶಿಷ್ಯಂದಿರು, ಬಂಧು ಬಳಗವನ್ನು ಅಗಲಿದ್ದಾರೆ.
ಸಂಸ್ಕೃತ ವಿದ್ವಾಂಸರಾಗಿದ್ದ ಅವರು, ಹಿಂದೂ ಸಮಾಜದ ಉನ್ನತಿಗೆ ವಿಶೇಷ ಕೊಡುಗೆಗಳನ್ನು ಸಲ್ಲಿಸಿದ್ದರು. ವಿವಿಧ ಮಂದಿರಗಳಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಗಳನ್ನು ನೆರವೇರಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿದ್ದ ಅವರು, ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದ ಅವರು,ರಾಷ್ಟ್ರೀಯ
ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.
1940 ರಲ್ಲಿ ಪ್ರಸಿದ್ಧ ಕಿಲಿಂಗಾರು ವೈದಿಕ ಕುಟುಂಬದ ವೇ.ಬ್ರ.ಸುಬ್ರಾಯ ಭಟ್ಟ-ಪರಮೇಶ್ವರಿ ಅಮ್ಮ ದಂಪತಿಯ ಹಿರಿಯ ಪುತ್ರರಾಗಿ ಜನಿಸಿದ ಅವರು, ಮಧುರೆಯ ತಿರುವೇಂಗಡಂ ಗುರುಕುಲ ಕುಂಭಕೋಣಂನಲ್ಲಿ ವ್ಯಾಪಕ ಅಧ್ಯಯನ ನಡೆಸಿ ವೇದಶಾಸ್ತ್ರಗಳಲ್ಲಿ ಪಾರಾಂಗತರಾಗಿದ್ದರು.
ಶೃಂಗೇರಿ, ಶ್ರೀರಾಮಚಂದ್ರಾಪುರ ಮಠ ಸೇರಿದಂತೆ ವಿವಿಧ ಮಠ ಮಂದಿರಗಳು, ಸಂಘಸಂಸ್ಥೆಗಳ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದರು.
ಮೃತರು ಪ್ರಸಿದ್ದ ವೇದ ವಿದ್ವಾಂಸರಾಗಿದ್ದು, ದಶಕಗಳ ಹಿಂದೆ ಪುತ್ರಕಾಮೇಷ್ಠಿ ಸಹಿತ ಹಲವು ಪ್ರಾಚೀನ ಕ್ರಮದ ಯಾಗಗಳನ್ನು ಮುನ್ನಡೆಸಿದವರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ ಪಳ್ಳತ್ತಡ್ಕದ ಸ್ವಗೃಹದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.