ನವದೆಹಲಿ/ಹೈದರಾಬಾದ್: 'ಗಂಭೀರ ಪ್ರಕರಣಗಳ ಅಪರಾಧಿಗಳನ್ನು ಇರಿಸುವ ಕತ್ತಲ ಕೋಣೆ ಜೈಲುವಾಸದಲ್ಲಿ ಇರಿಸಿ, ಚಿಕಿತ್ಸೆಗೂ ಅನುಮತಿ ನೀಡದಿರುವುದು ಪ್ರೊ.ಜಿ.ಎನ್. ಸಾಯಿಬಾಬಾ ಅವರ ಆರೋಗ್ಯ ತೀವ್ರವಾಗಿ ಹದಗೆಡಲು ಕಾರಣ. ಜೈಲಿನಿಂದ ಬಿಡುಗಡೆಯಾಗುವ ಹೊತ್ತಿಗೆ ಅವರ ದೇಹ ಸಂಪೂರ್ಣವಾಗಿ ಬಳಲಿತ್ತು' ಎಂದು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ (ಎನ್‌ಪಿಆರ್‌ಡಿ) ಭಾನುವಾರ ಆರೋಪಿಸಿದೆ.
ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದರೆ ಎನ್ನುವ ಆರೋಪ ಹೊರಿಸಿ, 'ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಮಹಾರಾಷ್ಟ್ರ ಪೊಲೀಸರು ಮಾನವಹಕ್ಕುಗಳ ಹೋರಾಟಗಾರ ಸಾಯಿಬಾಬಾ ಅವರನ್ನು 2014ರಲ್ಲಿ ಬಂಧಿಸಿದ್ದರು. 10 ವರ್ಷಗಳಿಂದ ಜೈಲುವಾಸದಲ್ಲಿದ್ದ ಸಾಯಿಬಾಬಾ ಅವರನ್ನು ಸಾಕ್ಷ್ಯಗಳ ಕೊರತೆಯ ಕಾರಣ 2024ರ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್ ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಸಾಯಿಬಾಬಾ ಅವರ ಸಾವಿನ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆ, 'ಸುಳ್ಳು ಪ್ರಕರಣವೊಂದರಲ್ಲಿ ಸಾಯಿಬಾಬಾ ಅವರನ್ನು ಜೈಲಿಗೆ ಹಾಕಲಾಗಿತ್ತು. ಬಂಧನಕ್ಕೂ ಮೊದಲೇ ಅವರಿಗೆ ಹಲವು ವಿಧವಾದ ಆರೋಗ್ಯ ಸಮಸ್ಯೆಗಳಿದ್ದವು. ಜೈಲುವಾಸದ ಬಳಿಕ, ಅವರಿಗೆ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಂಡವು' ಎಂದು ಹೇಳಿದೆ.
ಸಾಯಿಬಾಬಾ ಅವರನ್ನು ಬಂಧಿಸುವ ವೇಳೆ ಅವರ ಒಂದು ಭುಜಕ್ಕೆ ಬಿದ್ದ ತೀವ್ರ ಹೊಡೆತದ ಕಾರಣ, ಅವರ ಕೈ ನಿಷ್ಕ್ರಿಯಗೊಂಡಿತ್ತು. 2017ರಲ್ಲಿ ಅವರನ್ನು ದೆಹಲಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಈ ವೇಳೆಯೇ ಅವರ ಪಿತ್ತಕೋಶದಲ್ಲಿ ಕಲ್ಲುಗಳಿವೆ ಎಂದು ಪತ್ತೆಯಾಗಿತ್ತು. ತಕ್ಷಣವೇ ಚಿಕಿತ್ಸೆಯಾಗಬೇಕು ಎಂದು ವೈದ್ಯರು ತಿಳಿಸಿದ್ದರು. ಆದರೆ, ಅವರಿಗೆ ಚಿಕಿತ್ಸೆಗೆಗಾಗಿಯೂ ಜಾಮೀನು ಅಥವಾ ಪೆರೋಲ್ ಅನ್ನು ನಿರಾಕರಿಸಲಾಯಿತು' ಎಂದು ದೂರಿದೆ.
ಪಿತ್ತಕೋಶದಲ್ಲಿನ ಕಲ್ಲುಗಳ ಚಿಕಿತ್ಸೆ ಬಳಿಕ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿಯೇ ಸಾಯಿಬಾಬು ಅವರು ಶನಿವಾರ ರಾತ್ರಿ ನಿಧನರಾದರು.
- ವೇದಿಕೆ ಹೇಳಿದ್ದು... * ಜೀವಿಸುವ ಹಕ್ಕು ಗೌರವ ಸಮಾನತೆಯ ಹಕ್ಕು ಹಿಂಸೆಯಿಂದ ರಕ್ಷಣೆ ಕ್ರೌರ್ಯ ಅಮಾನವೀಯ ಹಾಗೂ ಅಗೌರವದಿಂದ ಕೂಡಿದ ವರ್ತನೆಯಿಂದ ರಕ್ಷಣೆ ಸೂಕ್ತ ವಸತಿಯ ಹಕ್ಕು ಹಾಗೂ ಆರೋಗ್ಯದ ಹಕ್ಕನ್ನು ಸಾಯಿಬಾಬಾ ಅವರಿಂದ ಕಿತ್ತುಕೊಳ್ಳಲಾಗಿತ್ತು * ಅಂಗವಿಕಲರನ್ನು ಜೈಲುಗಳಲ್ಲಿ ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತು ವಿಶೇಷ ಕಾನೂನುಗಳಿವೆ. ಭಾರತದಲ್ಲಿಯೂ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಇಂಥ ಕಾನೂನು ಒಪ್ಪಂದಗಳಿವೆ. ವಿಶ್ವಸಂಸ್ಥೆಯ ಇಂಥ ಒಪ್ಪಂದಗಳಿಗೆ ಭಾರತವೂ ಸಹಿ ಹಾಕಿದೆ. ಆದರೂ ಸಾಯಿಬಾಬಾ ಅವರ ವಿಚಾರದಲ್ಲಿ ಈ ಎಲ್ಲ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ---- ಕೊಲೆಗಡುಕರಿಗೆ ಅತ್ಯಾಚಾರಿಗಳಿಗೂ ಜಾಮೀನು ಅಥವಾ ಪೆರೋಲ್ ನೀಡಲಾಗುತ್ತದೆ. ಆದರೆ ಸಾಯಿಬಾಬಾ ಅವರಿಗೆ ಇವುಗಳನ್ನು ನಿರಾಕರಿಸಲಾಯಿತು. ಇದು ಅಪರಾಧ ನ್ಯಾಯದಾನ ವ್ಯವಸ್ಥೆಯ ವಸ್ತುಸ್ಥಿತಿ. ಸಾಯಿಬಾಬಾ ಅವರ ಸಾವು ಸ್ಟ್ಯಾನ್ ಸ್ವಾಮಿ ಅವರ ಸಾವನ್ನು ನೆನಪಿಸುವಂತೆ ಮಾಡಿದೆ.
ಮುರಳೀಧರನ್ ಪ್ರಧಾನ ಕಾರ್ಯದರ್ಶಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ
ದೇಹ ದಾನ
ಸಾಯಿಬಾಬಾ ಅವರ ಆಸೆಯಂತೆಯೇ ಅವರ ದೇಹವನ್ನು ಗಾಂಧಿ ವೈದ್ಯಕೀಯ ಕಾಲೇಜಿಗೆ ಅಕ್ಟೋಬರ್ 14ರಂದು ದಾನ ಮಾಡಲಾಗುವುದು ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿರುವ 'ಎಲ್.ವಿ. ಪ್ರಸಾದ್ ಐ ಇನ್‌ಸ್ಟಿಟ್ಯೂಟ್'ಗೆ ಅವರ ಕಣ್ಣುಗಳನ್ನು ಈಗಾಗಲೇ ದಾನ ಮಾಡಲಾಗಿದೆ. ---- ಅವರಿಗೆ ಎರಡು ಸಲ ಕೋವಿಡ್ ತಗುಲಿತ್ತು. ಜೈಲುವಾಸದ ವೇಳೆ ಅವರ ಆರೋಗ್ಯವು ಸಂಪೂರ್ಣವಾಗಿ ಹದಗೆಟ್ಟಿತು. ಮತ್ತೊಂದು ಚಮತ್ಕಾರ ನಡೆಯುತ್ತದೆ ಎಂದುಕೊಂಡಿದ್ದೆವು. ಆದರೆ ಅದು ನಡೆಯಲಿಲ್ಲ.
ಮಂಜೀರಾ ಸಾಯಿಬಾಬಾ ಅವರ ಪುತ್ರಿ