ವಯನಾಡ್: 'ವಯನಾಡ್ ಲೋಕಸಭಾ ಕ್ಷೇತ್ರದ ವೃದ್ಧ ಮಹಿಳೆಯೊಬ್ಬರು ನನಗೆ ಜಪಮಾಲೆ ನೀಡಿದ್ದು, ಮದರ್ ತೆರೇಸಾ ಅವರು ನನಗೆ ಬಹಳಾ ಹಿಂದೆ ಉಡುಗೊರೆಯಾಗಿ ನೀಡಿದ್ದನ್ನು ನೆನಪಿಸಿತು' ಎಂದು ವಯನಾಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಕ್ಷೇತ್ರದ ಮೀನಂಗಡಿಯಲ್ಲಿ ಸೋಮವಾರ ಪ್ರಚಾರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇತ್ತೀಚೆಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸೇನಾಧಿಕಾರಿಯೊಬ್ಬರು ನನ್ನ ಬಳಿ ಬಂದು, ತಮ್ಮ ತಾಯಿ ಥ್ರೆಸಿಯಾ ಅವರು ನನ್ನನ್ನು ನೋಡಬೇಕೆಂದಿದ್ದಾರೆ. ಆದರೆ ಕಾಲಿನ ಸಮಸ್ಯೆಯಿಂದ ಅವರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಹೀಗಾಗಿ ನಾನೇ ಅವರ ಮನೆಗೆ ಹೋದೆ.ನನ್ನನ್ನು ನೋಡುತ್ತಿದ್ದಂತೆ ಮಗುವಿನಂತೆ ತಬ್ಬಿಕೊಂಡರು' ಎಂದು ನೆನಪಿಸಿಕೊಂಡಿದ್ದಾರೆ.
'ಥ್ರೆಸಿಯಾ ಅವರ ಪ್ರೀತಿಗೂ ನನ್ನ ತಾಯಿಯ ಪ್ರೀತಿಗೂ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಅವರು ನನ್ನ ಕೈಗೆ ಜಪಮಾಲೆಯನ್ನು ನೀಡಿ, ತಾಯಿ ಸೋನಿಯಾಗೆ ನೀಡುವಂತೆ ಹೇಳಿದರು. ವಯನಾಡ್‌ಗೆ ಕಾಲಿಡುವ ಮೊದಲೇ ನನಗೊಬ್ಬರು ತಾಯಿ ಇಲ್ಲಿದ್ದಾರೆ ಎಂಬ ಅರಿವಾಯಿತು. ನಾನು 19 ವರ್ಷದವಳಿದ್ದಾಗ ನಮ್ಮ ತಂದೆ ಅವರ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಮದರ್ ತೆರೇಸಾ ಅವರು ಮನೆಗೆ ಬಂದಿದ್ದರು. ಆಗ ನಾನು ಜ್ವರದಿಂದ ಬಳಲುತ್ತಿದ್ದೆ. ನನ್ನ ಹಣೆ ಮೇಲೆ ಕೈಯಿಟ್ಟಿದ್ದ ಅವರು, ಕೈಗೆ ಜಪಮಾಲೆ ಕೊಟ್ಟಿದ್ದರು. ಇಂದು ಥ್ರೆಸಿಯಾ ಅವರ ಪ್ರೀತಿಯೂ ನನಗೆ ಅದೇ ಭಾವವನ್ನು ನೆನಪಿಸಿತು' ಎಂದು ಪ್ರಿಯಾಂಕಾ ಹೇಳಿದ್ದಾರೆ.
'ಮದರ್ ತೆರೇಸಾ ಅವರು ತಮ್ಮೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲು ಹೇಳಿದ್ದರು. ಅವರ ಭೇಟಿಯ ಐದಾರು ವರ್ಷಗಳ ನಂತರ ನನಗೆ ಮದುವೆಯಾಯಿತು. ನಂತರ ನಾನು ಮದರ್ ತೆರೇಸಾ ಸಿಸ್ಟರ್‌ಗಳ ಜತೆ ದೆಹಲಿಯಲ್ಲಿ ಕೆಲಸ ಮಾಡಿದೆ. ಮಕ್ಕಳಿಗೆ ಇಂಗ್ಲಿಷ್ ಹಾಗೂ ಹಿಂದಿ ಕಲಿಸುವುದು ನನ್ನ ಕೆಲಸವಾಗಿತ್ತು. ಆ ಮೂಲಕವೇ ಅವರ ಭಾವನೆ, ನೋವುಗಳನ್ನು ಅರಿಯುವ ಪ್ರಯತ್ನ ಮಾಡುವುದೇ ಸೇವೆ ಎಂದಿದ್ದರು. ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತದ ನಂತರ ನನ್ನ ಸೋದರ ರಾಹುಲ್ ಗಾಂಧಿ ಅವರೊಂದಿಗೆ ಬಂದಿದ್ದಾಗ, ಇಲ್ಲಿ ನಡೆಯುತ್ತಿದ್ದ ಜಾತಿ, ಧರ್ಮ ಮೀರಿದ ಸಮುದಾಯ ಕಾರ್ಯಗಳನ್ನು ಕಂಡಾಗ, ಅವರ ಮಾತುಗಳು ನೆನಪಾದವು' ಎಂದಿದ್ದಾರೆ.
ಕ್ರೈಸ್ತ ಮತಗಳ ಸೆಳೆಯುವ ಪ್ರಿಯಾಂಕಾ ಯತ್ನ?
ಎರ್ನಾಕುಲಂ ಜಿಲ್ಲೆಯ ಚೆರೈ ಮತ್ತು ಮುನಂಬಾಮ್ ಪ್ರದೇಶಗಳಲ್ಲಿ ಕ್ರೈಸ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆ 2024ರ ವಿರೋಧಿಸಿದ ಕಾಂಗ್ರೆಸ್ ಹೇಳಿಕೆ ಕುರಿತು ಈ ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರಿಯಾಂಕಾ ಅವರು ತಮ್ಮ ಭಾಷಣದ ಮೂಲಕ ಕ್ರೈಸ್ತ ಮತಗಳನ್ನು ಸೆಳೆಯಲು ಯತ್ನಿಸಿದರು ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸೈರೊ ಮಲಬಾರ್ ಚರ್ಚ್ ಬೆಂಬಲಿತ ದೀಪಿಕಾ ಪತ್ರಿಕೆಯ ಸಂಪಾದಕೀಯದಲ್ಲೂ ಈ ಕುರಿತು ಪ್ರಸ್ತಾಪಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಪಕ್ಷಗಳು ನೊಂದ ಜನರ ಕಣ್ಣೀರು ಗಮನಿಸದೇ ಕೇವಲ ವಕ್ಫ್ ಮಂಡಳಿಯ ಹಿತವನ್ನು ಬಯಸುವ ಕೆಲಸ ಮಾಡುತ್ತಿವೆ ಎಂದು ಕಟುವಾಗಿ ಟೀಕಿಸಲಾಗಿದೆ.