ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಚಿರತೆ ದಾಳಿಗೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಲಖಿಂಪುರ ಖೇರಿ ಜಿಲ್ಲೆಯ ಶಾರದಾನಗರ ಅರಣ್ಯ ವ್ಯಾಪ್ತಿಯಲ್ಲಿ ಮೊದಲನೆಯ ಘಟನೆ ವರದಿಯಾಗಿದೆ.
ಶನಿವಾರ ಸಂಜೆ ತಂದೆಯ ಜತೆ ಸೈಕಲ್‌ನಲ್ಲಿ ಬರುತ್ತಿದ್ದ ವೇಳೆ ಶಂಕಿತ ಚಿರತೆಯು ಗಂಗಾಬೆಹರ್ ಗ್ರಾಮದ ಸಜೇತ್ ಎಂಬ 12 ವರ್ಷದ ಬಾಲಕನ ಮೇಲೆ ದಾಳಿ ಮಾಡಿದೆ. ಬಾಲಕನ ಮೃತದೇಹವು ಘಟನೆ ನಡೆದ ಸ್ಥಳದಿಂದ ಕೆಲವು ಕಿ.ಮೀ ದೂರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಮತ್ತೊಂದು ಘಟನೆ ಪಧುವಾ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ತೈಹಾ ಗ್ರಾಮದ ರಿಜಾ ಎಂಬ ಮೂರು ವರ್ಷದ ಮೃತ ಬಾಲಕಿ ಮೇಲೆ ದಾಳಿ ಮಾಡಿದೆ. ಆಕೆಯ ಮೃತದೇಹ ಘಾಘ್ರಾ ನದಿಯಲ್ಲಿ ತೇಲುತ್ತಿತ್ತು. ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ (ಡಿಟಿಆರ್) ಬಫರ್ ವಲಯದಲ್ಲಿ ಈ ಘಟನೆ ನಡೆದಿದೆ. ಚಿರತೆ ದಾಳಿ ನಡೆಸಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಮನೆಗೆ ನುಗ್ಗಿದ ಚಿರತೆಯು ತನ್ನ ಮಗಳನ್ನು ಎತ್ತುಕೊಂಡು ಹೋಗಿದೆ ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ.